Site icon Vistara News

ಶ್ರೀ ಕೇಶವಾನಂದ ಭಾರತೀ vs ಕೇರಳ ಸರ್ಕಾರ ಕೇಸ್ ತೀರ್ಪು ಪ್ರಮುಖ ಅಧ್ಯಯನ ವಸ್ತು: ನ್ಯಾ. ಸಂತೋಷ್ ಹೆಗ್ಡೆ

Santosh Hegde

ಬೆಂಗಳೂರು: ದೇಶದ ಸ್ವಾತಂತ್ರೋತ್ತರ ಇತಿಹಾಸದಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ vs ಕೇರಳ ಸರ್ಕಾರ ಪ್ರಕರಣದ ತೀರ್ಪು ಒಂದು ಮಹತ್ವ ಪೂರ್ಣ ತೀರ್ಪಾಗಿದೆ. ಇದು ದೇಶವಾಸಿಗಳ ಹಕ್ಕಿನ ಬದಲಾವಣೆ ಮಾಡಲು ಶಾಸಕಾಂಗಕ್ಕೆ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ, ಮಾಜಿ ಭಾರತೀಯ ಸಾಲಿಸಿಟರ್ ಜನರಲ್ ಹಾಗೂ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ ಹೇಳಿದರು.

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ 50ನೇ ವರ್ಷಾಚರಣೆ ಅಂಗವಾಗಿ ಯುನಿವರ್ಸಲ್ ಸ್ಕೂಲ್ ಆಫ್ ಲಾ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇರಳ ಸರ್ಕಾರ ಹಾಗೂ ಧಾರ್ಮಿಕ ಸಂಸ್ಥೆ ನಡುವಿನ ಕಾನೂನು ಸಮರದ ತೀರ್ಪು, ಕಾನೂನು ವಿದ್ಯಾರ್ಥಿಗಳಿಗೆ ಹಾಗೂ ವಿದ್ವಾಂಸರಿಗೆ ದೊಡ್ಡ ಮಟ್ಟದ ಅಧ್ಯಯನ ವಸ್ತುವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಯಲ್ಲಿ ಈ ತೀರ್ಪಿನ ಪಾತ್ರ ದೊಡ್ಡದು. ನಮ್ಮ ಮಠದ ಜಮೀನಿನ ಪ್ರಶ್ನೆಯಲ್ಲ. ಈ ಕಾನೂನು ಹೋರಾಟದ ಮೂಲಕ ಸಂವಿಧಾನ-ಪ್ರಜಾಪ್ರಭುತ್ವ ರಕ್ಷಿಸಲು ಸಾಧ್ಯವಾಗಿದ್ದು ನಮಗೆ ಅತ್ಯಂತ ಖುಷಿಕೊಟ್ಟ ಸಂಗತಿ ಎಂದು ಹೇಳಿದರು.

ನಾವು ಸಂಸತ್ ಬಗ್ಗೆ ಭರವಸೆ ಕಳೆದುಕೊಂಡಾಗ, ನಮಗಿರುವ ಆಶಾಭಾವನೆ ನ್ಯಾಯಾಂಗ ಮತ್ತು ಸಂವಿಧಾನ ಮಾತ್ರ. ಚುನಾವಣೆಗೆ ಮೊದಲು ಮತದಾರರು ಭ್ರಷ್ಟ್ರಾಗುತ್ತಾರೆ. ಚುನಾವಣಾ ಬಳಿಕ ನಾಯಕರು ಭ್ರಷ್ಟರಾಗುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಸಿಎಎ ಬಗೆಗಿನ ತಪ್ಪು ಕಲ್ಪನೆ ನಿವಾರಣೆ ಆಗಲಿ

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವಕೀಲ, ಮಾಜಿ ಅಡ್ವೊಕೇಟ್ ಜನರಲ್ ರವಿ ವರ್ಮ ಕುಮಾರ್, ಈ ತೀರ್ಪಿನಿಂದಾಗಿ ಸಮಾಜದಲ್ಲಿ ಅಸಮಾನತೆ ಮುಂದುವರಿಯುವಂತಾಯಿತು. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ, ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಗೆ ಭಾರತ ರತ್ನ ನೀಡಿದ ಬಳಿಕ ಈ ದೇಶದ ಸಂವಿಧಾನದಲ್ಲಿರುವ ಜಾತ್ಯತೀತರೇ ಶಬ್ದಕ್ಕೆ ಅರ್ಥವಿದೆಯೇ? ಈ ಸಂಬಂಧಿತ ಬೆಳವಣಿಗೆಗಳಿಂದ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗಿಲ್ಲವೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರ, ದ್ವೇಷ ಭಾಷಣ, ಸಂವಿಧಾನದ ಮೂಲತತ್ವಗಳು ಮರೆಯಾಗುತ್ತಿರುವುದಕ್ಕೆ ಸಾಕ್ಷಿ ಎಂದು ಅವರು ಟೀಕಿಸಿದರು.

ಕರ್ನಾಟಕ ಹೈಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು, ಇತ್ತೀಚಿನ ದಿನಗಳಲ್ಲಿ ಸಂಸತ್‌ನಲ್ಲಿ ಕಾಯ್ದೆಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಪಡೆಯುತ್ತಿವೆ. ಸಂವಿಧಾನ ತಿದ್ದುಪಡಿಯ ಮಾತು ಕೇಳಿ ಬರುತ್ತಿದೆ. ಇದೆಲ್ಲ ಸರಿಯೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Bandipur National Park: ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆ: ಈಶ್ವರ ಖಂಡ್ರೆ

ಬೆಂಗಳೂರಿನ ಯುನಿವರ್ಸಲ್ ಸಂಸ್ಥೆ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ಕಾಲೇಜು ಪ್ರಾಂಶುಪಾಲ ವಿಶ್ವಾಸ್ ಪುಟ್ಟಸ್ವಾಮಿ, ಕಾಲೇಜು ಆಡಳಿತಾಧಿಕಾರಿ ಸಂತೋಷ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Exit mobile version