ಬೆಂಗಳೂರು: ಇಲ್ಲಿನ ವಿಜಯಶ್ರೀ ಲೇಔಟ್‌ನ ಮೈಲಸಂದ್ರದಲ್ಲಿ ಸೋಮವಾರ (ಫೆ.೬) ಬೆಳಗಿನ ಜಾವ ತೆಂಗಿನ ಮರ ಏರಿದವನಿಗೆ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಪ್ರಜ್ಞೆ ತಪ್ಪಿ ಮರದಲ್ಲಿ ನೇತಾಡುತ್ತಿದ್ದವನನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿವಿಲ್ ಡಿಫೆನ್ಸ್ ತಂಡಕ್ಕೆ ಮಾಹಿತಿ ನೀಡಿ ಕರೆಸಿಕೊಂಡಿದ್ದಾರೆ. ತೆಂಗಿನ ಮರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಣಾ ತಂಡ ಸುಮಾರು 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ. ಮೇಲ್ನೋಟಕ್ಕೆ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ರಕ್ಷಣಾ ಪಡೆಯ ಕಾರ್ಯಾಚರಣೆ ನೋಡಲು ಜನಸಾಗರವೇ ಹರಿದು ಬಂದಿತ್ತು.
ಸ್ಥಳೀಯರ ಸಮಯ ಪ್ರಜ್ಞೆಯಿಂದ ಅಪರಿಚಿತನ ಜೀವ ಉಳಿದಂತಾಗಿದೆ. ಸಮಯಕ್ಕೆ ಸರಿಯಾಗಿ ಬಂದು ಜೀವ ಉಳಿಸಿದ ರಕ್ಷಣಾ ಪಡೆಯವರಿಗೆ ನಾಗರಿಕರು ಧನ್ಯವಾದ ತಿಳಿಸಿದ್ದಾರೆ.