ಯಾದಗಿರಿ: ವಿದ್ಯುತ್ ಶಾಕ್ ಹೊಡೆದಿದ್ದರಿಂದ ಕಂಬದಲ್ಲೇ ತಲೆಕಳಗಾಗಿ ವ್ಯಕ್ತಿಯೊಬ್ಬ ನೇತಾಡುತ್ತಾ ನರಳಾಡಿದ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮಸ್ಥರು ಸಮಯಪ್ರಜ್ಞೆಯಿಂದ ವಿದ್ಯುತ್ ಫ್ಯೂಸ್ ತೆಗೆದಿದ್ದರಿಂದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಜೋಳದಡಗಿ ಗ್ರಾಮದ ಮರೆಪ್ಪ ಗಾಯಾಳು. ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಈತ, ವಿದ್ಯುತ್ ಕಂಬ ಏರಿ ತಂತಿ ಜೋಡಣೆ ಮಾಡುತ್ತಿದ್ದ. ಈ ವೇಳೆ ವಿದ್ಯುತ್ ಪೂರೈಕೆಯಾದ ಹಿನ್ನೆಲೆಯಲ್ಲಿ ಮರೆಪ್ಪಗೆ ವಿದ್ಯುತ್ ಶಾಕ್ ಹೊಡೆದಿದೆ. ಇದರಿಂದ ಕಂಬದಲ್ಲೇ ಒದ್ದಾಡುತ್ತಾ ಫ್ಯೂಸ್ ತೆಗೆಯಿರಿ ಎಂದು ಸೂಚಿಸಿದ್ದಾನೆ. ಇದರಿಂದ ಎಚ್ಚೆತ್ತ ಗ್ರಾಮಸ್ಥರು ಟಿಸಿ (ವಿದ್ಯುತ್ ಪರಿವರ್ತಕ) ಹತ್ತಿರ ತೆರಳಿ ಫ್ಯೂಸ್ ತೆಗೆದಿದ್ದಾರೆ. ಹೀಗಾಗಿ ಅಪಾಯದಿಂದ ವ್ಯಕ್ತಿ ಪಾರಾಗಿದ್ದಾನೆ.
ಇದನ್ನೂ ಓದಿ | Ganja Seized: ಹುಮ್ನಾಬಾದ್‌ನಲ್ಲಿ 118 ಕೆ.ಜಿ ಗಾಂಜಾ ವಶಕ್ಕೆ; ಇಬ್ಬರು ಆರೋಪಿಗಳ ಅರೆಸ್ಟ್
ವಿದ್ಯುತ್ ಶಾಕ್‌ನಿಂದ ಮರೆಪ್ಪಗೆ ಸುಟ್ಟ ಗಾಯಗಳಾಗಿವೆ. ಹೀಗಾಗಿ ಆತನನ್ನು ಸೈದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೈನ್‌ಮ್ಯಾನ್ ಬದಲು ಮರೆಪ್ಪ ವಿದ್ಯುತ್ ಕಂಬ ಹತ್ತಿದ್ದಾನೆ. ವಿದ್ಯುತ್ ತಂತಿ ದುರಸ್ತಿ ಮಾಡಬೇಕಾದರೆ ಜೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಎಲ್‌ಸಿ (ಲೈನ್ ಕ್ಲಿಯರೆನ್ಸ್) ಪಡೆದು ವಿದ್ಯುತ್ ಸಂಪರ್ಕ ಕಡಿತ ಮಾಡಿಸಿ ದುರಸ್ತಿ ಮಾಡಬೇಕು. ಅಧಿಕಾರಿಗಳ ಗಮನಕ್ಕೆ ತಾರದೇ ದುರಸ್ತಿ ಮಾಡಲು ಹೋದ ಹಿನ್ನೆಲೆಯಲ್ಲಿ ಅವಘಡ ನಡೆದಿದೆ ಎನ್ನಲಾಗಿದೆ.