ಬಳ್ಳಾರಿ: ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsav)ದ ಹಿನ್ನೆಲೆಯಲ್ಲಿ ಪ್ರತಿ ಮನೆಯ ಮೇಲೂ ತಿರಂಗಾ (Har Ghar Tiranga) ಹಾರಿಸಿ ದೇಶಾಭಿಮಾನ ಮೆರೆಯಲಾಗುತ್ತಿದೆ. ಆದರೆ, ಬಳ್ಳಾರಿ ನಗರದ ಗಣೇಶ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ ರಾಷ್ಟ್ರಧ್ವಜದ ಮೇಲೆ ಜೀಸಸ್ ಎಂದು ಬರೆದಿರುವ ಸ್ಟಿಕ್ಕರ್ ಅಂಟಿಸಿ, ಧ್ವಜಾರೋಹಣ ಮಾಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ರಘು ಎಂಬ ವ್ಯಕ್ತಿಯ ಮನೆ ಮೇಲೆ ಧ್ವಜಾರೋಹಣ ಮಾಡಲಾಗಿದ್ದು, ಅಶೋಕ ಚಕ್ರದ ಬಳಿ ಜೀಸಸ್ ಸ್ಟಿಕ್ಕರ್ ಇರುವುದನ್ನು ತಿಳಿದ ಕೂಡಲೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ರಘು ಮನೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಲೇ ಗಾಂಧಿನಗರ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಮೇಶ್ವರ ಗಡದ್ ಅವರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ರಘು ಮನೆಗೆ ಆಗಮಿಸಿದ ಹಲವು ಪೊಲೀಸರು ತಕ್ಷಣ ಧ್ವಜದ ಮೇಲಿರುವ ಸ್ಟಿಕ್ಕರ್ಅನ್ನು ತೆರವುಗೊಳಿಸಿದ್ದಾರೆ. ಆದಾಗ್ಯೂ, ಆರೋಪಿಯು, “ನಾನು ಜೀಸಸ್ ಎಂದು ಬರೆದಿಲ್ಲ. ನನ್ನ ಮಗ ಬರೆದಿದ್ದಾನೆ” ಎಂಬುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ, ಹಿಂದೂ ಸಂಘಟನೆಗಳ ಕಾರ್ಯಕರ್ತರ ಜತೆ ಮಾತುಕತೆ ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Har ghar tiranga| ಕುಸಿದುಬಿದ್ದ ಮನೆಯ ಅವಶೇಷಗಳ ಮೇಲೆಯೇ ತಿರಂಗಾ ಹಾರಾಟ