ಬೆಳಗಾವಿ: ಜಾಗತಿಕ ಲಿಂಗಾಯತ ಮಹಾಸಭಾ, ವಿಜಯಪುರಕ್ಕೆ ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣ ಪ್ರಸ್ತಾವನೆಯ ಪರವೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ಸಚಿವ ಎಂ.ಬಿ. ಪಾಟೀಲ್ ಪ್ರಸ್ತಾವನೆಗೆ ಅದೇ ಜಿಲ್ಲೆಯ ಮತ್ತೊಬ್ಬ ಸಚಿವರು ವಿರೋಧ ವ್ಯಕ್ತಪಡಿಸಿ, ವಿಜಯಪುರವನ್ನು ಬಸವೇಶ್ವರ ಜಿಲ್ಲೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಮೊದಲು ಒಂದು ನಿರ್ಣಯಕ್ಕೆ ಬರಲಿ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಬಿ. ಜಾಮದಾರ ಹೇಳಿದ್ದಾರೆ.
ವಿಜಯಪುರವನ್ನು ಬಸವೇಶ್ವರ ಜಿಲ್ಲೆ ಮಾಡುವ ಎಂ.ಬಿ ಪಾಟೀಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಮಂತ್ರಿಗಳಲ್ಲಿ ದ್ವಂದ್ವ ನಿಲುವಿದೆ, ಡಿಸಿ ನಿಲುವು ಕೂಡ ಬೇರೆಯೇ ಇದೆ. ಸರ್ಕಾರ ಈ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂಬುದು ನಮ್ಮ ಕಲ್ಪನೆ. ನಾನು ಈ ಹಿಂದೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದೆ. ಆಗ 17 ಜಿಲ್ಲೆ, ಪಟ್ಟಣಗಳ ಹೆಸರನ್ನು ಬದಲಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ. ಬೆಳಗಾಂ ಅನ್ನು ಬೆಳಗಾವಿ, ಬಿಜಾಪುರವನ್ನು ವಿಜಯಪುರ ಮಾಡಲು ಶಿಫಾರಸು ಮಾಡಿದ್ದೆ. ಐದಾರೂ ವರ್ಷಗಳ ಬಳಿಕ ಕೇಂದ್ರ ಸರ್ಕಾರ ಹೆಸರು ಬದಲಿಸುವ ತೀರ್ಮಾನ ತೆಗೆದುಕೊಂಡಿತು ಎಂದು ಹೇಳಿದರು.
ಇದನ್ನೂ ಓದಿ | Caste Census Report : ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಸ್ವೀಕರಿಸುವೆನೆಂದ ಸಿದ್ದರಾಮಯ್ಯ; ಎಚ್‌ಡಿಕೆ ವಿರುದ್ಧ ವಾಗ್ದಾಳಿ
ಜಿಲ್ಲೆ ಅಥವಾ ರಾಜ್ಯದ ಮರುನಾಮಕರಣದ ಬಗ್ಗೆ ಅಂತಿಮ ನಿರ್ಣಯ ಆಗಬೇಕಿರುವುದು ರಾಜ್ಯ ಸರ್ಕಾರದಲ್ಲಿ, ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಪ್ರಸ್ತಾವನೆ ಸಲ್ಲಿಕೆ ಆಗುತ್ತೋ? ಇಲ್ವೋ? ಎಂಬ ಬಗ್ಗೆ ನಿಖರ ಮಾಹಿತಿ ನನಗಿಲ್ಲ. ಸರ್ಕಾರದ ನಿರ್ಣಯಕ್ಕೆ ನಾವು ಬದ್ಧ, ಯಾವುದೇ ಕಾರಣಕ್ಕೂ ವಿರೋಧ ಮಾಡಲ್ಲ ಎಂದು ತಿಳಿಸಿದರು.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಲಿ
ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಂಬಂಧ ನಾಗಮೋಹನದಾಸ್ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಆ ವರದಿ ಅಂಗೀಕರಿಸಿ ಹಿಂದಿನ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ಕೇಂದ್ರಕ್ಕೆ ಕಳುಹಿಸಿತ್ತು. ವರದಿ ತಲುಪಿ ಎಂಟು ತಿಂಗಳ ಬಳಿಕ ಕೇಂದ್ರ ಸರ್ಕಾರ ಮೂರು ಕಾರಣ ಕೇಳಿ ಪತ್ರ ಬರೆದು, ಲಿಂಗಾಯತ ಧರ್ಮ ಸ್ವತಂತ್ರ ಎಂದು ಘೋಷಿಸಲು ಕಷ್ಟವಾಗುತ್ತಿದೆ ಎಂದು ತಿಳಿಸಿತ್ತು ಎಂಬುವುದಾಗಿ ಹೇಳಿದರು.
ಕೇಂದ್ರದ ಪತ್ರಕ್ಕೆ ನಾನು ಯಾವುದೇ ಕ್ರಮ ಜರುಗಿಸಲ್ಲ ಎಂದು ಅಂದಿನ ಸಿಎಂ ಎಚ್‌ಡಿಕೆ ಹೇಳಿದ್ದರು. ನಂತರ ಸಿಎಂ ಆದ ಬಿಎಸ್‌ವೈ, ಬಸವರಾಜ್ ಬೊಮ್ಮಾಯಿ ಲಿಂಗಾಯತ ಧರ್ಮ ಹೋರಾಟಕ್ಕೆ ವಿರುದ್ಧವಾಗಿದ್ದವರು. ಈ ಕಾರಣಕ್ಕೆ ನಾವು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಿಲ್ಲ. ಕೇಂದ್ರ ಕೊಟ್ಟ ಮೂರು ಕಾರಣಗಳು ಸತ್ಯಕ್ಕೆ ದೂರವಾಗಿವೆ. ನಮ್ಮ ಬಳಿ ಸಮರ್ಪಕ ದಾಖಲೆಗಳಿದ್ದು, ಕೇಂದ್ರಕ್ಕೆ ತಲುಪಿಸಲು ಸಿದ್ಧರಿದ್ದೇವೆ. ನಮ್ಮ ಬಳಿ ಇರುವ ದಾಖಲೆಗಳೆವೂ ಕೇಂದ್ರ ಸರ್ಕಾರದ ಬಳಿಯೂ ಇವೆ. ಲಿಂಗಾಯತ ಜಾತಿಯಲ್ಲ ಧರ್ಮ ಎಂದು ಹಲವು ಬ್ರಿಟಿಷ್ ಅಧಿಕಾರಿಗಳು ಹೇಳಿದ ದಾಖಲೆಗಳಿವೆ. ಈ ಎಲ್ಲ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಲು ನಾವು ನಿರ್ಣಯಿಸಿದ್ದೇವೆ ಎಂದು ತಿಳಿಸಿದರು.
ಲಿಂಗಾಯತರಲ್ಲಿ ಎಸ್‌ಸಿ, ಎಸ್‌ಟಿ ಇದ್ದಾರೆ, ಸ್ವತಂತ್ರ ಧರ್ಮವಾದರೆ ಅವರಿಗೆ ಆ ಸೌಲಭ್ಯ ಸಿಗಲ್ಲ ಎಂದು ಕೇಂದ್ರ ಪ್ರಶ್ನಿಸಿದೆ. ಆದರೆ, ಸಿಖ್ ಧರ್ಮಕ್ಕೆ 1963ರಲ್ಲಿ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೇಂದ್ರ ನೀಡಿತು. ಸಿಖ್ಖರಲ್ಲಿರುವ ಎಸ್‌ಸಿ- ಎಸ್‌ಟಿಗಳಿಗೆ ಸೌಲಭ್ಯ ಮುಂದುವರಿಸುವ ನಿರ್ಣಯವನ್ನು ಅಂದಿನ ರಾಷ್ಟ್ರಪತಿ ಕೈಗೊಂಡರು. ಬೌದ್ಧ ಧರ್ಮದ ವಿಚಾರದಲ್ಲೂ ಕೇಂದ್ರ ಸರ್ಕಾರ, ರಾಷ್ಟ್ರಪತಿ ಇದೆ ನಿರ್ಣಯ ಕೈಗೊಂಡರು. ಈ ಎಲ್ಲ ದಾಖಲೆಗಳು ಕೇಂದ್ರ ಸರ್ಕಾರದ ಬಳಿಯೇ ಇವೆ. ಈಗ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡಲಿ ಎಂದು ಆಗ್ರಹಿಸಿದರು.
ನಮ್ಮಲ್ಲಿನ ಎಸ್‌ಸಿ- ಎಸ್‌ಟಿಗಳಿಗೆ ಈಗಿರುವ ಸೌಲಭ್ಯ ಮುಂದುವರಿಸಿ ಎಂದು ಆಗ್ರಹಿಸಿದ ಜಾಮದಾರ ಅವರು, ಒಂದು ವೇಳೆ ಲಿಂಗಾಯತರಿಗೆ ಇದನ್ನು ಅನ್ವಯ ಮಾಡದಿದ್ದರೆ ತಾರತಮ್ಯ ಆಗಲಿದೆ, 1871ರ ಜನಗಣತಿ ಪ್ರಕಾರ ಲಿಂಗಾಯತರನ್ನು ಹಿಂದುಗಳೆಂದು ಪರಿಗಣಿಸಲಾಗಿದೆ ಎಂದು ಕೇಂದ್ರ ಮತ್ತೊಂದು ಕಾರಣದಲ್ಲಿ ತಿಳಿಸಿದೆ. 1871ರ ಅಂದಿನ ಮೈಸೂರು ರಾಜ್ಯದ ಗಣತಿಯಲ್ಲಿ ಲಿಂಗಾಯತ, ಜೈನರನ್ನು ಹಿಂದು ಧರ್ಮದಿಂದ ದೂರ ಇಡಲಾಗಿದೆ. ಈ ಕಾರಣ ಕೇಳುವ ಮುನ್ನ ಕೇಂದ್ರದ ಅಧಿಕಾರಿಗಳು ಇವನ್ನೆಲ್ಲ ಗಮಸಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Namma Metro: ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಸಿಎಂ ಜತೆ ಚರ್ಚೆ: ಎಂ.ಬಿ. ಪಾಟೀಲ್
1891 ರಲ್ಲಿ ಮೈಸೂರು ಮಹಾರಾಜರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಆದೇಶ ನೀಡಿದ್ದಾರೆ. ಈ ಆದೇಶವೂ ಕೇಂದ್ರ ಸರ್ಕಾರದ ಬಳಿಯೇ ಇದೆ. ಈ ಎಲ್ಲ ಪ್ರತಿಯನ್ನು ನಾವು ಈ ಹಿಂದೆಯೂ ನೀಡಿದ್ದೇವೆ, ಈಗಲೂ ನೀಡುತ್ತೇವೆ. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯ ಆಧಾರ ರಹಿತವಾಗಿದ್ದು, ಮತ್ತೊಮ್ಮೆ ಪರಿಶೀಲಿಸಲಿ ಎಂದು ಒತ್ತಾಯಿಸಿದರು.