ಬೆಂಗಳೂರು: ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಣದ ಕಡೆ ಹೆಚ್ಚು ಗಮನ ಕೊಡಲಿಲ್ಲ. ನನ್ನ 48ನೇ ವಯಸ್ಸಿಗೆ ನಾನು ಪದವೀಧರನಾದೆ. ಮಂತ್ರಿಯಾಗಿದ್ದಕ್ಕಿಂತ ನನಗೆ ಪದವೀಧರನಾದಾಗ ಹೆಚ್ಚು ಸಂತೋಷವಾಯಿತು. ಕುದುರೆಯನ್ನು ರೇಸ್‌ನಲ್ಲಿ ಓಡುವಂತೆ ಮಾಡುವುದಲ್ಲ, ಕತ್ತೆಯನ್ನು ಓಡುವಂತೆ ಮಾಡುವುದೇ ನಿಜವಾದ ಶಿಕ್ಷಣ. ಇಂತಹ ಕೆಲಸವನ್ನು ವಿಜಯ ಕಾಲೇಜು ಮಾಡಲು ಪ್ರಯತ್ನಿಸುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಜಯನಗರದ ವಿಜಯ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ರಾಷ್ಟ್ರ ಮಟ್ಟದಲ್ಲಿ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವವರು. ಕೆಲವು ಶಾಲೆಗಳಲ್ಲಿ ಕೇವಲ ಹೆಚ್ಚು ಅಂಕಗಳಿಸಿದವರನ್ನು ಮಾತ್ರ ಸೇರಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಎಲ್ಲರನ್ನು ಸೇರಿಸಿಕೊಳ್ಳುತ್ತಾರೆ. ಓದಿನಲ್ಲಿ ಹಿಂದಿರುವ ಮಕ್ಕಳನ್ನು ಉತ್ತಮ ಶೈಕ್ಷಣಿಕ ಸಾಧನೆ ಮಾಡುವಂತೆ ಮಾಡಬೇಕು, ಅಂತಹ ಕೆಲಸವನ್ನು ವಿಜಯ ಪದವಿ ಪೂರ್ವ ಕಾಲೇಜು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಮನವಿ ಮಾಡಿ ಕಲಿಸಬೇಕಾದ ಪರಿಸ್ಥಿತಿ
ಈ ಹಿಂದೆ ಇದ್ದ ಗುರು ಶಿಷ್ಯರ ಸಂಬಂಧವೇ ಬೇರೆ, ಈಗಿರುವ ಗುರು ಶಿಷ್ಯರ ಸಂಬಂಧವೇ ಬೇರೆ. “ತ್ರೇತದೊಳ ಗುರುವು ಶಿಷ್ಯಗೆ ಜಂಗಿಸಿ ವಿದ್ಯೆ ಕಲಿಸಿ ಮಹಾಪ್ರಸಾದಂಗೆ, ದ್ವಾಪರದೊಳ್ ಗುರುವು ಶಿಷ್ಯಗೆ ದಂಡಿಸಿ ವಿದ್ಯೆ ಕಲಿಸಿ ಮಹಾಪ್ರಸಾದಂಗೆ, ಆದರೆ ಕಲಿಯುಗದೊಳ್ ಗುರುವು ಶಿಷ್ಯಂಗೆ ವಂದಿಸಿ ವಿದ್ಯೆ ಕಲಿಸಿ ಮಹಾಪ್ರಸಾದಂಗೆ” ಎಂಬ ಮಾತಿದೆ. ಅಂದರೆ, ತ್ರೇತಾಯುಗದಲ್ಲಿ ಗುರುಗಳು ಶಿಷ್ಯರನ್ನು ಚಚ್ಚಿ ಪಾಠ ಕಲಿಸಿದರೂ ಅದನ್ನು ಪ್ರಸಾದವೆಂದು ಸ್ವೀಕಾರ ಮಾಡುತ್ತಿದ್ದರು. ದ್ವಾಪರ ಯುಗದಲ್ಲಿ ಗುರುಗಳು ದಂಡಿಸಿದರೆ ಅದನ್ನೇ ಮಹಾಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಆದರೆ ಈಗ ಕಲಿಯುಗದಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಮನವಿ ಮಾಡಿ ಕಲಿಸಬೇಕಾದ ಪರಿಸ್ಥಿತಿ ಇದೆ. ನಾವು ಈ ಸಂದರ್ಭದಲ್ಲಿ ಇದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ | University of Fisheries: ಮೀನುಗಾರಿಕೆ ವಿವಿ ಸ್ಥಾಪನೆಗೆ ಕ್ರಮ: ಸಿದ್ದರಾಮಯ್ಯ
ಶಾಲೆಯಲ್ಲಿ ವಿದ್ಯೆ ಕಲಿಸುವವರು ಮಾತ್ರ ಶಿಕ್ಷಕರಲ್ಲ. ನಮ್ಮ ತಪ್ಪುಗಳನ್ನು ಗುರುತಿಸಿ ಬುದ್ಧಿ ಹೇಳುವವರು ಶಿಕ್ಷಕರು. ಹೀಗಾಗಿ ನಮಗೆ ಸಹಾಯ ಮಾಡುವವರನ್ನು ನಾವು ಮರೆಯಬಾರದು. ನಾವು ನಮ್ಮ ಮೂಲ ಮರೆತರೆ ಯಶಸ್ಸು ಸಾಧಿಸಲು ಆಗುವುದಿಲ್ಲ. ತಾಯಿಯೇ ನಮಗೆ ಮೊದಲ ಗುರು. ಹೀಗಾಗಿ ನಾವು ಸದಾ ಅವಳನ್ನು ನೆನೆಯುತ್ತೇವೆ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಅದರಂತೆ ನೀವು ಇವರನ್ನು ನೆನೆದು ಬದುಕಬೇಕು ಎಂದು ಹೇಳಿದರು.
ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿದ್ದಾರೆ. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. “By Birth I am an Agriculturist, By Profession I am a Businessman, By Choice I am an Educationist, By Passion I am a Politician, ಕಳೆದ ನಾಲ್ಕೈದು ವರ್ಷಗಳಿಂದ ನಾನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ನಾನು ಹೋಗಲು ಆಗಿಲ್ಲ. ನಿಮ್ಮ ಅಧ್ಯಕ್ಷರು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ನಾನು ಸಂತೋಷದಿಂದ ಒಪ್ಪಿ ನಿಮ್ಮನ್ನು ನೋಡಲು ಬಂದಿದ್ದೇನೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಎಂಬ ಆಧಾರ ಸ್ತಂಭಗಳಿವೆ. ಅದೇ ರೀತಿ ನಮ್ಮ ಸಮಾಜದಲ್ಲಿ ಕೃಷಿಕ, ಶಿಕ್ಷಕ, ಸೈನಿಕ ಹಾಗೂ ಶ್ರಮಿಕ ಬಹಳ ಮುಖ್ಯವಾದ ಅಂಗಗಳು. ನೀವು ನಿಮ್ಮ ಜೀವನದಲ್ಲಿ ನಾಲ್ಕು ಡಿ ಗಳನ್ನು ಅಳವಡಿಸಿಕೊಳ್ಳಬೇಕು. ನೀವು ಕನಸು ಕಾಣಬೇಕು (Dream), ಕನಸು ಸಾಕಾರಗೊಳಿಸಲು ಆಸೆ (Desire) ಪಡಬೇಕು. ಆ ಕನಸಿಗಾಗಿ ಬದ್ಧತೆ (Dedicate) ಇರಬೇಕು. ಆ ಕನಸಿನ ಸಾಕಾರಕ್ಕೆ ಶಿಸ್ತು (Discipline) ಹೊಂದಿರಬೇಕು. ಆಗ ನೀವು ದೇಶಕ್ಕೆ ಆಸ್ತಿಯಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ | DK Shivakumar: ಬ್ಲೂ ಫಿಲಂ ತೋರಿಸಿದ್ದು ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ: ಡಿಕೆಶಿ ಸವಾಲು
ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿ, ಈಗಿನ ಕಟುಸತ್ಯ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನಿಮ್ಮನ್ನು ಹೇಗೆ ತಯಾರು ಮಾಡಬೇಕು ಎಂಬ ವಿಚಾರ ಪ್ರಸ್ತಾಪಿಸಿದರು. ನಿಮ್ಮ ಕೈಗೆ ಮೊಬೈಲ್ ಮತ್ತು ಇಂಟರ್ ನೆಟ್ ಸಿಕ್ಕಿದ್ದು, ನಿಮ್ಮ ಶಿಕ್ಷಕರಿಗೆ ನೀವು ಪಾಠ ಮಾಡುವ ಶಕ್ತಿ ಬಂದಿದೆ ಎಂದು ತಿಳಿಸಿದರು.