ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP Election) ಚುನಾವಣೆಗೆ ಮುನ್ನವೇ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಬಿಬಿಎಂಪಿ ಪುನರ್ ರಚನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.
ಐಎಎಸ್ ನಿವೃತ್ತ ಅಧಿಕಾರಿ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಸಿದ್ದಯ್ಯ ಹಾಗೂ ರವಿಚಂದರ್ ಅವರು ಸದಸ್ಯರಾಗಿದ್ದಾರೆ. ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ಕಳೆದ ಬಾರಿ ರಚನೆ ಮಾಡಿದ್ದ ಸಮಿತಿಯನ್ನೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೂ ನೇಮಿಸಿದೆ.
ಕಳೆದ ವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆ ಸಂದರ್ಭದಲ್ಲಿ ವಿಭಜನೆ ಅನಿವಾರ್ಯ ಎಂದು ದಿನೇಶ್ ಗುಂಡೂರಾವ್ ಹೇಳಿದ್ದರು. ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ವಿಭಜನೆ ಅನಿವಾರ್ಯ ಎಂದು ಅಭಿಪ್ರಾಯ ಹೇಳಿದ್ದರು. ಈಗ ಪುನರ್‌ರಚನೆ ಸಂಬಂಧ ಸಮಿತಿ ರಚಿಸಿದೆ.
ಇದನ್ನೂ ಓದಿ: BBMP Election: 3 ವರ್ಷದ ನಂತರ ಬೆಂಗಳೂರಿಗರಿಗೆ ಸಿಗಲಿದ್ದಾರೆ ಜನಪ್ರತಿನಿಧಿಗಳು: ಬಿಬಿಎಂಪಿ ಚುನಾವಣೆ ಫಿಕ್ಸ್!
ಮಹಾನಗರ ಪಾಲಿಕೆಯ ಸುಗಮ ಆಡಳಿತದ ದೃಷ್ಟಿಯಿಂದ ಹಾಗೂ ನಗರದ ಜನರಿಗೆ ಉತ್ತಮವಾದ ಮೂಲ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಬಿಬಿಎಂಪಿಯನ್ನು ಪುನರ್‌ರಚನೆ ಮಾಡಲು ಸರ್ಕಾರ ಉದ್ದೇಶಿಸಿದೆ. ಸಮಿತಿಯ ಅಧ್ಯಯನ ವರದಿಯಂತೆ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ. ಬಿಬಿಎಂಪಿ ಚುನಾವಣೆಗೂ ಮೊದಲೇ ಪುನರ್‌ರಚನೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.