Site icon Vistara News

ಪಠ್ಯಪುಸ್ತಕದಲ್ಲಿ ಪರ್ಸೆಂಟೇಜ್‌, ಅಲ್ಪಸಂಖ್ಯಾತರ ಹಣವೂ ಲೂಟಿ: ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

HD Kumaraswamy

ಬೆಂಗಳೂರು: ಶಾಲಾ ಪಠ್ಯಪುಸ್ತಕ ಮುದ್ರಣದಲ್ಲಿಯೂ ಪರ್ಸೆಂಟೇಜ್‌ ದಂಧೆ ನಡೆಯುತ್ತಿದೆ. ಮುದ್ರಣಕಾರರ ಹಣ ವಸೂಲಿ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದಲ್ಲೂ ಕಮಿಷನ್‌ ದಂಧೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯಲ್ಲಿ ಪ್ರತಿವರ್ಷ ಪಠ್ಯ ಪುಸ್ತಕ ಮುದ್ರಣ ಮಾಡಲಾಗುತ್ತದೆ. ಈಗ ದಕ್ಷಿಣ ಭಾರತದ ಎಲ್ಲಾ ಮುದ್ರಣ ಸಂಸ್ಥೆಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ಅವಕಾಶ ಕೊಡಲಾಗಿದೆ. ರಾಜ್ಯದವರಿಗೆ ನೀಡದೇ ಇತರೆ ಮುದ್ರಣಕಾರರು ಟೆಂಡರರ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಿ ವ್ಯಾಪಾರ ಮಾಡುತ್ತಾರೆ. ಒಬ್ಬ ಮುದ್ರಣಕಾರ ಹೇಳಿದನಂತೆ, ಸ್ವಲ್ಪ ಬಿಗಿ ಮಾಡಿಕೊಳ್ಳಿ. 10% ಅಲ್ಲ‌ 15% ಕೊಡುತ್ತಾರೆ ಎಂದು. ಇದು ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆಯುತ್ತಿರುವುದು. ಪ್ರಶ್ನೆ ಮಾಡಿದರೆ ಕುಮಾರಸ್ವಾಮಿ ಭ್ರಮನಿರಸಗೊಂಡಿದ್ದಾನೆ ಅಂತಾರೆ. ಏನು ಮಾಡಲಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಗುತ್ತಿಗೆದಾರರ ಬಳಿ ಕಮಿಷನ್ ಕಿತ್ತು ತಿನ್ನಲಾಗುತ್ತಿದೆ. ಈಗ ಅವರು ಪುಸ್ತಕ ಮುದ್ರಣಕಾರರನ್ನೂ ಬಿಡುತ್ತಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ | Basavaraja Rayareddy : ನಾನು ಆರ್ಥಿಕ ಸಲಹೆಗಾರ, ಸಂಬಳ ತಗೊಳ್ಳಲ್ಲ ಎಂದ ರಾಯರೆಡ್ಡಿ

ಅಲ್ಪಸಂಖ್ಯಾತರ ಹೆಸರಿನಲ್ಲೂ ಕೊಳ್ಳೆ

ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನದ ವಿಚಾರದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರು, ಅದು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವಲ್ಲ. ಕಮಿಷನ್ ದಂಧೆಗೆ ಉಪಯೋಗಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಈ ಅನುದಾನದ ನಾಟಕವಷ್ಟೇ. ಅವರಿಗೆ ಪರ್ಸೆಂಟೇಜ್ ಎಷ್ಟು ಬರುತ್ತೆ ಎಂಬುದು ಜಗಜ್ಜಾಹೀರಾಗಿದೆ. ಅವರನ್ನು ಓಲೈಸಿಕೊಳ್ಳಲು ಹಾಗೂ ಅವರ ಹಿಂದೆ ನಿಂತುಕೊಳ್ಳುವವರ ಸಂತೃಪ್ತಿಗಾಗಿ ಈ ಹಣ ಮೀಸಲಿಟ್ಟಿದ್ದಾರೆಯೇ ಹೋರತು ಸಮುದಾಯದ ಅಭಿವೃದ್ಧಿಗಾಗಿ ಅಲ್ಲ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಕೆಲವರನ್ನ ಖುಷಿಪಡಿಸಲು, ತಾತ್ಕಾಲಿಕವಾಗಿ ಈ ರೀತಿಯ ಘೋಷಣೆ ಮಾಡುತ್ತಾರೆ. ಅದು ಯಾವುದು ಜಾರಿಗೆ ಬರೊದಿಲ್ಲ. ಹಿಜಾಬ್ ವಿಚಾರವಾಗಿ ಮೈಸೂರಿನಲ್ಲಿ ಹೇಳಿಕೆ ನೀಡಿ ಮತ್ತೆ ವಾಪಸ್ ಪಡೆದರು. ಹುಬ್ಬಳ್ಳಿಯಲ್ಲಿ ಮುಸ್ಲೀಮರಿಗೆ 10,000 ಕೋಟಿ ರೂ. ಅನುದಾನ ಕೊಡುತ್ತೇವೆ ಎಂದು ಹೇಳಿದರು. ಅವರ ಬಳಿ ಹಣ ಎಲ್ಲಿದೆ? ಅವರ ಹಿಂದೆ ಇರುವವರನ್ನು ಉದ್ಧಾರ ಮಾಡಲು ಹಣ ಕೊಡುತ್ತಿದ್ದಾರೆ ಅಷ್ಟೇ ಎಂದು ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | ಬರೀ ಮಾತಲ್ಲಿ ʼಸಬ್ ಕಾ ಸಾಥ್‌, ಸಬ್ ಕಾ ವಿಕಾಸ್ʼ: ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯ

ರಾಜ್ಯದಲ್ಲಿ ವಿದೇಶಿ ನೇರ ಹೂಡಿಕೆ ಶೇ. 46ರಷ್ಟು ಕುಸಿತ

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕುಸಿದಿದೆ. ಈ ವರ್ಷದಲ್ಲಿ ರಾಜ್ಯಕ್ಕೆ ವಿದೇಶಿ ನೇರ ಹೂಡಿಕೆ ಶೆ.46ರಷ್ಟು ಅಂದರೆ; 2.8 ಶತಕೋಟಿ ಡಾಲರ್ ನಷ್ಟು ಹೂಡಿಕೆ ಕಡಿಮೆ ಆಗಿದೆ. ಪರಿಣಾಮವಾಗಿ ಉದ್ಯೋಗ ಸೃಷ್ಟಿಯೂ ಕುಸಿದಿದೆ. ಎಂಬಿ ಪಾಟೀಲ್ ಅಮೆರಿಕಗೆ ಹೋಗಿದ್ದರು. 25 ಸಾವಿರ ಕೋಟಿ ಹೂಡಿಕೆ ಆಗಿದೆ ಎಂದು ಅವರು ಹೇಳಿದ್ದರು. ಬಹುಶಃ ಆ ಹಣ ವಿಮಾನದಲ್ಲಿ ಬರ್ತಾ ಇರಬೇಕು ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರ ಇದ್ದಾಗ 5 ಲಕ್ಷ 20 ಸಾವಿರ ಕೋಟಿಗೆ ವಿದೇಶಿ ಹೂಡಿಕೆ ಬಂದಿದೆ ಅಂದರು. ಅದಕ್ಕೆ 75 ಕೋಟಿ ರೂ ಖರ್ಚು ಮಾಡಿದ್ದರು. ಇದರಲ್ಲಿ 90% ರಷ್ಟು ಬೆಂಗಳೂರಿನ ಹೊರಗಡೆ ಹೂಡಿಕೆ ಆಗ್ತಿದೆ ಎಂದು ಹೇಳಲಾಗಿತ್ತು. 2023ನಲ್ಲಿ ಶೆ.46ರಷ್ಟು ವಿದೇಶಿ ಹೂಡಿಕೆ ಇಳಿಕೆಯಾಗಿದೆ ಎಂದರೆ ಸಣ್ಣ ಮಾತಲ್ಲ. ಬಿಜೆಪಿ ಸರ್ಕಾರ ಇದ್ದ 2022-2023 ಸಾಲಿನಲ್ಲಿ 5.3 ಶತಕೋಟಿ ಹೂಡಿಕೆ ಬಂದಿದ್ದರೆ, 2023ರಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ) 2.2 ಶತಕೋಟಿ ಹೂಡಿಕೆಯಷ್ಟೇ ಬಂದಿದೆ ಎಂದು ಮಾಜಿ ಸಿಎಂ ಅಂಕಿಅಂಶಗಳ ಸಮೇತ ಹೇಳಿದರು.

ಈ ಸರ್ಕಾರದ ಕಾರ್ಯ ವೈಖರಿ ಸರಿ ಇಲ್ಲ. ದಾವೋಸ್‌ಗೆ ಹೋಗಲಿಕ್ಕೆ 9 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ. ಇದೆಲ್ಲ ಜನರ ತೆರಿಗೆ ಹಣ. ಅದನ್ನು ಮನಸೋಇಚ್ಛೆ ಪೋಲು ಮಾಡಲಾಗುತ್ತಿದೆ ಎಂದು ಅವರು ದೂರಿದರು.

ಬೆಂಗಳೂರಿನಲ್ಲಿ ಸುರಂಗ ನಿರ್ಮಾಣ ಮಾಡುವ ಯೋಜನೆಗಾಗಿ ಇಬ್ಬರು ಸಚಿವರ ನಡುವೆ ಫೈಟ್ ಶುರುವಾಗಿದೆ. ಈ ಸುರಂಗ ಯೋಜನೆಗೆ 80,000 ಕೋಟಿ ರೂ. ವೆಚ್ಚ ಆಗುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ, ಈ ಯೋಜನೆಯನ್ನು ಯಾವಾಗ ಪೂರ್ಣ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮಿನ್ಸ್ ರಸ್ತೆಯಿಂದ ಹೆಬ್ಬಾಳದವರಿಗೆ ಸುರಂಗ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ್ದೆ. ಅದಕ್ಕೆ ಅಂತಿಮ ಹಂತದ ಅನಿಮೋದನೆಯನ್ನೂ ಕೊಡಲಾಗಿತ್ತು. ಆದರೆ, ಅಷ್ಟರಲ್ಲಿ ನನ್ನ ಸರಕಾರ ಹೋಯಿತು. ಆ ಯೋಜನೆ ಅಲ್ಲಿಗೇ ನಿಂತು ಹೋಯಿತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಎಸ್ಟೆಲ್ಲಾ ಕೊಳ್ಳೆ ಹೊಡೆಯಬೇಕೋ ಅಷ್ಟನ್ನೂ ಮಾಡಲು ಈ ಸರ್ಕಾರ ಹೊರಟಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರತಿ ಚದರ ಅಡಿಗೆ 100 ರೂಪಾಯಿ ವಸೂಲಿ ಮಾಡುವುದರಲ್ಲಿ ಇವರು ಬ್ಯುಸಿ ಇದ್ದಾರೆ. ಜನರ ಬಗ್ಗೆ ಆಲೋಚನೆ ಮಾಡುವುದಕ್ಕೆ ಇವರಿಗೆ ಸಮಯ ಇಲ್ಲ ಎಂದು ಅವರು ಟೀಕಾಪ್ರಹಾರ ನಡೆಸಿದರು.

ಈ ಸರ್ಕಾರದ ಯೋಗ್ಯತೆಗೆ ಸರಕಾರಿ ಶಾಲೆಗಳನ್ನು ಸ್ವಚ್ಛ ಮಾಡಲು ಹಣವೂ ಇಲ್ಲ, ಸಿಬ್ಬಂದಿಯೂ ಇಲ್ಲ. ಶಿಕ್ಷಕರು ಮಕ್ಕಳಿಂದ ಸ್ವಚ್ಚತಾ ಕಾರ್ಯ ಮಾಡಿಸುತ್ತಾರೆ. ತಪ್ಪು ಸರ್ಕಾರದ್ದು, ಶಿಕ್ಷೆ ಶಿಕ್ಷಕರಿಗೆ. ಎಲ್ಲರನ್ನೂ ಸಮಾನವಾಗಿ ನೋಡಬೇಕು ಎನ್ನುತ್ತಿದೆ ಸರ್ಕಾರ. ಆದರೆ, ಸಮಾಜ ಕಲ್ಯಾಣ ಇಲಾಖೆಯಿಂದ 11 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಲಾಗಿದೆ. ಶಾಲೆಗಳಲ್ಲಿ ಚಾಕ್ ಪೀಸ್, ಡಸ್ಟರ್ ತರಲಿಕ್ಕೂ ಶಿಕ್ಷಕರೇ ಹಣ ಖರ್ಚು ಮಾಡಬೇಕು. ರಾಜ್ಯದಲ್ಲಿ 17 ಸಾವಿರ ಶಾಲೆಗಳಿಗೆ ಕಟ್ಟಡವೇ ಇಲ್ಲ. ಕಟ್ಟಡ ಇರುವ ಕಡೆ ಟೀಚರ್ ಇರಲ್ಲ. ಟೀಚರ್ ಇರುವ ಕಡೆ ಕಟ್ಟಡ ಇಲ್ಲ. ಇದು ಸರ್ಕಾರದ ಶಿಕ್ಷಣ ನೀತಿ ಎಂದು ಸರಕಾರಕ್ಕೆ ಚಾಟಿ ಬೀಸಿದರು.

ಇದನ್ನೂ ಓದಿ | BJP Karnataka : ಖರ್ಗೆ, ಪರಮೇಶ್ವರ್‌ ಸಹಿತ ಎಲ್ಲ ದಲಿತರಿಗೆ ಸಿದ್ದರಾಮಯ್ಯ ಮೋಸ ಎಂದ ಛಲವಾದಿ

ಈಗ ಹೊಸದಾಗಿ ಉದ್ಯೋಗ ಮೇಳ ಮಾಡುತ್ತೇವೆ ಎಂದು ಹೊರಟಿದ್ದಾರೆ. ಉದ್ಯೂಗ ಮೇಳ ಇರಲಿ, ಮೊದಲು ಸರ್ಕಾರದಲ್ಲಿ ಖಾಲಿ ಇರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿ ಎಂದ ಅವರು, ರಾಜ್ಯದಲ್ಲಿ ನೇಕಾರರ ಪರಿಸ್ಥಿತಿ ದಯನೀಯವಾಗಿದೆ. ದಿನಪೂರ್ತಿ ಇಡೀ ಕುಟುಂಬ ದುಡಿದರೂ 500 ರೂಪಾಯಿ ಸಂಪಾದನೆ ಮಾಡುವುದು ಕಷ್ಟವಾಗಿದೆ. ರಾಜ್ಯದ 39 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರಲ್ಲಿ 22 ಮಂದಿ ಬೆಳಗಾವಿ ಜಿಲ್ಲೆಯವರು. ಇವರಿಗೆ ಗ್ಯಾರಂಟಿ ಹಣ ತಲುಪುಲ್ಲ. ಅದಕ್ಕೆ ಸರಕಾರ ಏನು ಮಾಡಿದೆ ಎಂದು ಅವರು ಪ್ರಶ್ನೆ ಮಾಡಿದರು.

Exit mobile version