ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ (Bengaluru Water Crisis) ಉಂಟಾಗಿದೆ. ಈ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಕೆಲ ಮಾಲೀಕರು, ಟ್ಯಾಂಕರ್ ನೀರಿನ ದರ ಹೆಚ್ಚಳ ಮಾಡಿರುವುದರಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ನಗರದಲ್ಲಿ ಕೆಲವೆಡೆ 6000 ಲೀ. ಟ್ಯಾಂಕರ್ ನೀರನ್ನು 2500 ಕೊಟ್ಟು ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದಕ್ಕೆ ಅಸಮಾಧಾನ ಹೊರಹಾಕಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಈ ವಾಟರ್ ಮಾಫಿಯಾಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು, ಜತೆಗೆ ಸಮರ್ಪಕ ನೀರು ಪೂರೈಸುವ ಮೂಲಕ ನೀರಿನ ಗ್ಯಾರಂಟಿ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಆರ್. ಅಶೋಕ್ ಅವರು, ಇನ್ನೂ ಈ ವರ್ಷದ ಬೇಸಿಗೆ ಕಾಲವೇ ಆರಂಭವಾಗಿಲ್ಲ, ಆದರೆ ಈಗಾಗಲೇ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಮ್ಮ I.N.D.I.A ಮೈತ್ರಿಕೂಟದ ಡಿಎಂಕೆ ಪಕ್ಷದ ಜೊತೆ ದೋಸ್ತಿ ಉಳಿಸಿಕೊಳ್ಳಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ಕಾವೇರಿ ನೀರnfnu ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿದ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಈಗ ಬೆಂಗಳೂರಿನ ಜನತೆ ಖಾಸಗಿ ಟ್ಯಾಂಕರ್‌ಗಳಿಗೆ ಸಾವಿರಾರು ರೂಪಾಯಿ ತೆತ್ತುವ ಪರಿಸ್ಥಿತಿ ತಂದಿಟ್ಟಿದೆ ಎಂದು ಕಿಡಿಕಾರಿದ್ದಾರೆ.
ಬರ ಪರಿಸ್ಥಿತಿಯಿಂದ ಬೆಂಗಳೂರು ನಗರದಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ಮೊದಲೇ ಅಂದಾಜಿಸಿ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಲು, ಹಳೇ ಕೊಳವೆ ಬಾವಿಗಳ ಮರುಪೂರಣ ಮಾಡಲು, ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕಲು ಕ್ರಮ ಕೈಗೊಂಡಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.
ಇದನ್ನೂ ಓದಿ | PM Narendra Modi: ಮೋದಿ ಚಿಂತೆ ಮಾಡುವವರಲ್ಲ, ಚಿಂತನೆ ಮಾಡುವ ಪ್ರಧಾನಿ: ಪ್ರಲ್ಹಾದ್ ಜೋಶಿ
ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಾಯಿ ಮಾತಿಗೆ ಘೋಷಣೆ ಮಾಡಿ ಆಡಳಿತದ ಚುಕ್ಕಾಣಿಯನ್ನು ಸಂಪೂರ್ಣವಾಗಿ ಅಧಿಕಾರಿಗಳಿಗೆ ಕೊಟ್ಟು ಕಾಂಗ್ರೆಸ್ ನಾಯಕರು ಸದಾ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಪಕ್ಕದ ರಾಜ್ಯಗಳ ಚುನಾವಣೆ ಉಸಾಬರಿ ನೋಡಿಕೊಳ್ಳಲು ಕಾಲಹರಣ ಮಾಡುತ್ತಾ, ಬೆಂಗಳೂರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ ಪರಿಣಾಮ ಇವತ್ತು ಬೆಂಗಳೂರಿನ ಜನರು ಹನಿ ನೀರಿಗೂ ಪರದಾಡುವ ದುಸ್ಥಿತಿ ಬಂದಿದೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ರಾಜಕಾರಣ ಬಿಟ್ಟು ಜನಕಾರಣದತ್ತ ಗಮನ ಹರಿಸಿ ಬೆಂಗಳೂರಿನ ಜನತೆಗೆ ಕನಿಷ್ಠ ಪಕ್ಷ ಕುಡಿಯುವ ನೀರಿನ ಗ್ಯಾರೆಂಟಿ ಆದರೂ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕಾವೇರಿ ನೀರು ಪೂರೈಕೆಯೂ ಕಡಿಮೆ
ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಜಲಮಂಡಳಿ ಹೇಳುತ್ತಿದೆ. ಆದರೆ, ಇತ್ತೀಚೆಗೆ ನೀರಿನ ಪೂರೈಕೆ ಸಾಕಷ್ಟು ಕಡಿಮೆಯಾಗಿದೆ ಎಂದು ನಗರವಾಸಿಗಳು ಆರೋಪಿಸಿದ್ದಾರೆ. ಇದರಿಂದ ಖಾಸಗಿ ಟ್ಯಾಂಕರ್‌ಗಳ ಮಾಫಿಯಾ ಶುರುವಾಗಿದೆ.
ಇದನ್ನೂ ಓದಿ | 40 percent commission: ಸಿಎಂಗೆ ಕೋರ್ಟ್ ಸಮನ್ಸ್; ಜಾಹೀರಾತು ಕೊಟ್ಟರೆ ಮಾನನಷ್ಟ ಆಗಲ್ಲ: ವಕೀಲರು ಉತ್ತರಿಸುತ್ತಾರೆಂದ ಸಿದ್ದರಾಮಯ್ಯ
ಟ್ಯಾಂಕರ್ ದರ ಎಲ್ಲೆಲ್ಲಿ ಎಷ್ಟು?
ಬೆಂಗಳೂರಿನ ಆರ್.ಆರ್.ನಗರದಲ್ಲಿ 6000 ಲೀ. ಟ್ಯಾಂಕರ್ 2500 ರೂ., ಕೆ.ಆರ್.ಪುರದಲ್ಲಿ 1500 ರೂ., ನಾರಾಯಣಪುರದಲ್ಲಿ 1500 ರೂ., ಹಾಗೂ ವರ್ತೂರಿನಲ್ಲಿ 4000 ಲೀ.ಟ್ಯಾಂಕರ್ 800 ರೂ. ಇದೆ. ಹೀಗೆ ಬೇಕಾಬಿಟ್ಟಿ ದರ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿ, ಖಾಸಗಿ ಟ್ಯಾಂಕರ್‌ಗಳಿಗೆ ಏಕರೂಪ ದರ ನಿಗದಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.