ನವದೆಹಲಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಉಂಟಾಗಿರುವ ಗಡಿ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಡಿಸೆಂಬರ್ ೧) ವಿಚಾರಣೆ ನಡೆಸಲಿದೆ. ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಯ ವಿಚಾರಣಾರ್ಹತೆ (Maintainability) ಕುರಿತು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸಲಿದೆ.
ಗುರುವಾರ ವಿಚಾರಣೆಗೆ ಹೊಸ ನ್ಯಾಯಪೀಠವನ್ನು ರಚಿಸಲಾಗಿದೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಅನಿರುದ್ಧ ಬೋಸ್ ಹಾಗೂ ಹೃಷಿಕೇಶ್ ರಾಯ್ ಅವರ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ. ಕರ್ನಾಟಕದ ಪರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಜ್ಞ ವಕೀಲರ ತಂಡವನ್ನು ರಚಿಸಿದ್ದಾರೆ.
1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯನ್ನೇ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಅರ್ಜಿ ಸಲ್ಲಿಸಿತ್ತು. ಈ ಗಡಿ ವಿವಾದದ ಅರ್ಜಿ ವಿಚಾರಣೆ(Maintainability)ಯನ್ನು ಸುಪ್ರೀಂ ಕೋರ್ಟ್ ನಡೆಸಬೇಕೇ ಅಥವಾ ಬೇಡವೇ ಎಂಬುದರ ಕುರಿತೇ ಇತ್ಯರ್ಥವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಕಾನೂನು ತಂಡಗಳನ್ನು ಸಿದ್ಧಪಡಿಸಲಾಗಿತ್ತು. ಈ ಹಿಂದೆ ಅರ್ಜಿ ವಿಚಾರಣೆಯನ್ನು ನ.23 ನಿಗದಿಪಡಿಸಲಾಗಿದ್ದು, ಅದನ್ನು ಮತ್ತೆ ಮುಂದೂಡಲಾಗಿತ್ತು. ಇದಾದ ಬಳಿಕ ನವೆಂಬರ್ ೩೦ರಂದು ವಿಚಾರಣೆ ನಡೆಯಬೇಕಿತ್ತು. ಆಗಲೂ ವಿಚಾರಣೆ ನಡೆದಿರಲಿಲ್ಲ.
ಇದನ್ನೂ ಓದಿ | Border Dispute | ಡಿ. 3ರಂದು ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಭೇಟಿ ಫಿಕ್ಸ್; ಗಡಿಯಲ್ಲಿ ಸರಣಿ ಸಭೆ