ಹಾಸನ: ಕಳ್ಳ ಸ್ವಾಮೀಜಿಯೊಬ್ಬ ನಿಧಿ ತೆಗೆದು ಕೊಡುತ್ತೇನೆ ಎಂದು ಲಕ್ಷ ಲಕ್ಷ ರೂಪಾಯಿಯನ್ನು ಕಬಳಿಸಿದ್ದಲ್ಲದೆ, ಒಬ್ಬರ ಜೀವಕ್ಕೂ ಕುತ್ತು ತಂದಿದ್ದ ಪ್ರಕರಣವು ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ದೊಡ್ಡಮಗೆ ಗ್ರಾಮದ ಮಂಜೇಗೌಡ ಹಾಗೂ ಲೀಲಾವತಿ ದಂಪತಿಗೆ ಸ್ವಾಮೀಜಿ ಎಂದು ಹೇಳಿಕೊಂಡ ಮಂಜುನಾಥ ಎಂಬ ವ್ಯಕ್ತಿಯು ನಿಧಿ ಆಸೆ ತೋರಿಸಿ ವಂಚಿಸಿದ್ದು, ಹಣ ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾನೆ.
3 ಕೆ.ಜಿ. ಬೆಳ್ಳಿ ವಿಗ್ರಹಕ್ಕೆ ಚಿನ್ನದ ಲೇಪನ ಮಾಡಿ ಯಾರಿಗೂ ಕಾಣದ ಹಾಗೆ ಇವರ ಹೊಲದಲ್ಲಿ ಹೂತಿಟ್ಟಿದ್ದ. ಬಳಿಕ ರಾತ್ರಿ ಪೂಜೆ ಮಾಡಿ, ಮನೆಯವರೆದುರು ಚಿನ್ನದ ವಿಗ್ರಹ ನಿಮ್ಮ ಹೊಲದಲ್ಲಿ ಇದೆ ಎಂದು ಹೇಳಿ ಅವರೆದುರು ಅದನ್ನು ತೆಗೆದು ತೋರಿಸುತ್ತಿದ್ದ. ಈ ಮೂಲಕ ಜನರ ನಂಬಿಕೆ ಗಳಿಸುವ ಈತ ಮಂಜೇಗೌಡ ದಂಪತಿ ಬಳಿ 5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದ. ಅಲ್ಲದೆ, ತಾನು ನಿಧಿ ಕೊಡಿಸುತ್ತೇನೆ ಎಂದು ಪೂಜೆ ಮಾಡುವ ಸಂದರ್ಭದಲ್ಲಿ ಹೊಲದಲ್ಲಿ ತೆಗೆದ ವಿಗ್ರಹದ ಮೇಲೆ ರಕ್ತಾಭಿಷೇಕ ಮಾಡಿಸಲು ಮುಂದಾಗಿದ್ದಾನೆ. ಈ ಕಾರಣಕ್ಕಾಗಿ ಆ ಮನೆಯ ಸ್ತ್ರೀಯ ರಕ್ತ ಬೇಕಿದೆ ಎಂದು ಹೇಳಿದ್ದಲ್ಲದೆ, ಲೀಲಾವತಿಯವರ ಕೈ ನರ ಕತ್ತರಿಸಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಲೀಲಾವತಿ ಕುಸಿದುಬಿದ್ದಿದ್ದಾರೆ. ಈ ವೇಳೆ ಈ ಕಳ್ಳ ಸ್ವಾಮೀಜಿ ಪರಾರಿಯಾಗಿದ್ದಾನೆ.
ಲೀಲಾವತಿ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಗುಣಮುಖರಾದ ಅವರು ಮನೆಗೆ ವಾಪಸ್ ಆಗಿದ್ದಾರೆ. ಘಟನೆ ನಡೆದು ಒಂದು ವಾರದ ಬಳಿಕ ವಿಗ್ರಹ ಪರಿಶೀಲನೆ ಮಾಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ವಿಡಿಯೊ ವೈರಲ್ ಆಗಿದೆ. ಆದರೆ, ಮರ್ಯಾದೆಗೆ ಅಂಜಿ ಈ ಬಗ್ಗೆ ಕುಟುಂಬದವರು ಪ್ರಕರಣ ದಾಖಲಿಸಲು ಮುಂದಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ | ಒಂದುವರೆ ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ ಜತೆ ಮಠ ಬಿಟ್ಟು ಸ್ವಾಮೀಜಿ ಪರಾರಿ