Site icon Vistara News

Hampi Utsav: ಹಂಪಿ ಉತ್ಸವಕ್ಕೆ ಅದ್ಧೂರಿ ತೆರೆ; ನಟ ರವಿಚಂದ್ರನ್, ನೆನಪಿರಲಿ ಪ್ರೇಮ್‌ ಸೇರಿ ಹಲವು ಗಣ್ಯರು ಭಾಗಿ

The three-day Hampi Utsav concludes in a grand manner

ವಿಜಯನಗರ: ಮೂರು ದಿನಗಳ ಹಂಪಿ ಉತ್ಸವಕ್ಕೆ (Hampi Utsav) ಭಾನುವಾರ ರಾತ್ರಿ ಅದ್ಧೂರಿ ತೆರೆಬಿದ್ದಿತು. ಉತ್ಸವಕ್ಕೆ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿ ಸಂಗೀತ, ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ಸಮಾರೋಪ ಸಮಾರಂಭದಲ್ಲಿ ನಟ ರವಿಚಂದ್ರನ್, ನೆನಪಿರಲಿ ಪ್ರೇಮ್‌ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಸಮಾರೋಪ ಸಮಾರಂಭದಲ್ಲಿ ನಟ ರವಿಚಂದ್ರನ್ ಅವರು ಮಾತನಾಡಿ, ಹಂಪಿ ಹೆಸರು ಹೇಳಿದ ಕೂಡಲೇ ಮೈ ರೋಮಾಂಚನ ಆಗುತ್ತದೆ. ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆ ಹೇಳುತ್ತವೆ. ಸ್ನೇಹಿತರೆಲ್ಲ ಒಂದಾಗಲು ಪಾರ್ಟಿ ಮಾಡುತ್ತಾರೆ. ಯಾವುದೇ ಊರಿಗೆ ಹೋದರೂ ಆಡಂಬರ ಒಂದು ಕಡೆ ಆದರೆ, ನೀವು ಕೊಡುವ ಪ್ರೀತಿ ಇನ್ನೊಂದು ಕಡೆ. ಅಪ್ಪ – ಅಮ್ಮನನ್ನು ಕಳೆದುಕೊಂಡಿದ್ದೇನೆ. ಅವರನ್ನು ನಿಮ್ಮಂತಹ ಜನರ ಮಧ್ಯೆ ಬಂದಾಗ ಕಾಣುವೆ. ಕಲಾವಿದರು ಬದುಕಿರೋದು ಕಲೆಯಿಂದ, ಬದೋಕೋದಕ್ಕೆ ದುಡ್ಡು ಬೇಕಂತಲೇ ಗೊತ್ತಿರಲಿಲ್ಲ ಎಂದು ಹೇಳಿದರು.

ಪ್ರೇಮಲೋಕ ಸಿನಿಮಾ ಮಾಡಿದಾಗ ನಮ್ಮಪ್ಪ ಅಪ್ಪಿಕೊಂಡು ಅತ್ತರು. ಮತ್ತೊಂದು ಅಪ್ಪುಗೆ ಪುನೀತ್‌ರದ್ದು. ಹಂಪಿ ಉತ್ಸವ ಶುರುವಾಗಿ 37 ವರ್ಷ ಆಗಿದೆ. ಹೀಗಾಗಿ ಮತ್ತೊಂದು ಪ್ರೇಮ ಲೋಕ ಶುರು ಮಾಡುತ್ತೇನೆ. ಜಮೀರ್ ಅಹ್ಮದ್‌ರಿಂದ ಒಳ್ಳೆಯ ಕಾರ್ಯಕ್ರಮ ನಡೆದಿದೆ. ಡಿಸಿ ದಿವಾಕರ್ ಉತ್ಸಾಹ ಬೇಕು, ನೀವು ಕೊಡುವ ಹುಮ್ಮಸ್ಸಿನಿಂದ ಕಾರ್ಯಕ್ರಮ ಸಕ್ಸಸ್ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ | Hampi Utsav: ಹಂಪಿ ಉತ್ಸವದಲ್ಲಿ ಡಿ ಬಾಸ್‌ ಹವಾ; ಮಾಸ್‌ ಡೈಲಾಗ್‌ಗಳ ಮೂಲಕ ರಂಜಿಸಿದ ದರ್ಶನ್‌

ಮುಂದಿನ ವರ್ಷ ಪ್ರೇಮಲೋಕ ಸಿನಿಮಾ

ಯಾವುದೇ ಊರಿಗೆ ಬಂದರೂ ಅಲ್ಲಿನ ಮಣ್ಣು ಮೈಗೆ ಅಂಟಿಕೊಳ್ಳುತ್ತದೆ. ಐದುನೂರು ವರ್ಷದ ಹಿಂದೆ ನಮ್ಮ‌ ನೆಲದ ಗಮ್ಮತ್ತು ವಾಪಸ್ ಬಂತು. ಅದಕ್ಕೆ ಸಾಕ್ಷಿ ಅಯೋಧ್ಯೆ ಶ್ರೀರಾಮಂದಿರ, ಮೈಸೂರಲ್ಲಿ ದಸರಾ, ಹಂಪಿಯಲ್ಲಿ ಹಂಪಿ ಉತ್ಸವ ಆಚರಣೆ ಮಾಡುತ್ತೇವೆ. ಮುಂದಿನ ವರ್ಷ ಪ್ರೇಮಲೋಕ ರೆಡಿ ಮಾಡುತ್ತೇನೆ. ನಿಮಗೆ ಇಷ್ಟ ಆಗುವ ಸಿನಿಮಾ‌‌ ಕೊಡುತ್ತೇನೆ. ಆ ಸಿನಿಮಾದಲ್ಲಿ 20 – 25 ಸಾಂಗ್ ಇರಬೇಕು ಅಂತ ಸಿನಿಮಾ ಕೊಡುತ್ತೇನೆ. ನಿಮ್ಮ ಜೊತೆಯಲ್ಲಿ ಹುಟ್ಟದೇ ಇರಬಹುದು, ಪರದೇ ಮೂಲಕ ನಿಮ್ಮ ಮನದಲ್ಲಿ ಇದ್ದೇನೆ ಎಂದು ರವಿಚಂದ್ರನ್ ಹೇಳಿದರು.

ಮೂರು ದಿನಗಳಲ್ಲಿ 10 ರಿಂದ 12 ಲಕ್ಷ ಜನ ಭೇಟಿ

ಸಚಿವ ಜಮೀರ್‌ ಅಹ್ಮದ್‌ ಮಾತನಾಡಿ, ಹಂಪಿ ಉತ್ಸವಕ್ಕೆ ಪಕ್ಷ ಭೇದ ಇಲ್ಲ. ಇದಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ಅವರೇ ಸಾಕ್ಷಿ. ಹಂಪಿ ಉತ್ಸವದಲ್ಲಿ ಸಂತೋಷವೂ ಇದೆ, ದುಃಖವೂ ಇದೆ. ಮೂರು ದಿನಗಳಲ್ಲಿ ಹಂಪಿ ಉತ್ಸವಕ್ಕೆ 10 ರಿಂದ 12 ಲಕ್ಷ ಜನ ಬಂದಿದ್ದರು ಅಂತ ಮಾಹಿತಿ ಇದೆ. ರವಿಚಂದ್ರನ್ ಅವರು ಬಂದು ಕಾರ್ಯಕ್ರಮ ಯಶಸ್ವಿ ಮಾಡಿದ್ದಕ್ಕೆ ಧನ್ಯವಾದ. ವಿಜಯನಗರ ಜಿಲ್ಲೆಯಲ್ಲಿ ನಾಡಹಬ್ಬದ ರೀತಿ ಹಂಪಿ ಉತ್ಸವ ಆಚರಣೆ ಮಾಡಲಾಯ್ತು. ನನ್ನ ಒಬ್ಬನಿಂದ ಉತ್ಸವ ಸಕ್ಸಸ್ ಆಗಿಲ್ಲ. ಎಲ್ಲಾ ಅಧಿಕಾರಿಗಳು ಮಾಡಿದ ಕೆಲಸದಿಂದ ಯಶಸ್ವಿಯಾಗಿದೆ. ಪೊಲೀಸ್ ಇಲಾಖೆ ಬಹಳ ಚೆನ್ನಾಗಿ ಭದ್ರತೆ ವ್ಯವಸ್ಥೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಟ ನೆನಪಿರಲಿ ಪ್ರೇಮ್ ಮಾತನಾಡಿ, ಹಂಪಿ ಉತ್ಸವ ಅಂದ್ರೆ ನನಗೆ ಬಹಳ ಇಷ್ಟ. ಹಂಪಿಯಲ್ಲಿ ಪ್ರತಿ ಸ್ಮಾರಕ ಒಂದೊಂದು ಕಥೆ ಹೇಳುತ್ತವೆ. ಇಲ್ಲಿಗೆ ನಾನು ಬಹಳ ಸಾರಿ ಬಂದಿದ್ದೇನೆ. ವಿಜಯನಗರ ಸಾಮ್ರಾಜ್ಯದ ನೆಲ ಅಂದ್ರೆ ಮೈ ರೋಮಾಂಚನ ಆಗುತ್ತದೆ. ಇಲ್ಲಿನ ಕಲೆ, ವಾಸ್ತು ಶಿಲ್ಪ ಇಡೀ ಜಗತ್ತಿಗೆ ಚಿರಪರಿಚಿತ. ಹಂಪಿ ಉತ್ಸವಕ್ಕೂ ಬಹಳ ಬಾರಿ ಬಂದಿದ್ದೇನೆ. ಇಲ್ಲಿಗೆ ಅತಿಥಿಯಾಗಿ ಬಂದಿಲ್ಲ, ಮನೆ ಸಂಭ್ರಮ ಅಂತ ಬಂದಿದ್ದೇನೆ. ಮುಂದಿನ ಬಾರಿಯ ಹಂಪಿ ಉತ್ಸವಕ್ಕೂ ನಾನು ಬರುತ್ತೇನೆ ಎಂದು ಹೇಳಿದರು.

ಸಚಿವ ಜಮೀರ್‌ ಅಹ್ಮದ್‌ ಅವರ ಪುತ್ರ, ನಟ ಝೈದ್ ಖಾನ್ ಅವರ ಡಾನ್ಸ್

ಸಮಾರೋಪ ಸಮಾರಂಭದಲ್ಲಿ ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವ ಆನಂದ್ ಸಿಂಗ್, ಶಾಸಕರಾದ ಲತಾ, ಕಂಪ್ಲಿ ಗಣೇಶ್, ರಾಘವೇಂದ್ರ ಹಿಟ್ನಾಳ್, ಡಿಸಿ ದಿವಾಕರ್, ಸಿಇಒ ಸದಾಶಿವ ಪ್ರಭು ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ | Hampi Utsav 2024: ವಿಜಯನಗರ ಸಾಮ್ರಾಜ್ಯದ ವೈಭವ ರಾಜ್ಯದಲ್ಲಿ ಪುನಃ ಮರುಕಳಿಸಬೇಕು: ಸಿಎಂ ಸಿದ್ದರಾಮಯ್ಯ

ಗಮನ ಸೆಳೆದ ಶ್ವಾನ ಪ್ರದರ್ಶನ

ಹಂಪಿ ಉತ್ಸವದಲ್ಲಿ ಭಾನುವಾರ ಆಕರ್ಷಕ ಶ್ವಾನ ಪ್ರದರ್ಶನ ಗಮನ ಸೆಳೆಯಿತು. ಜರ್ಮನ್ ಶೆಫರ್ಡ್, ಲ್ಯಾಬ್ರಡರ್ ಸೇರಿ 19ಕ್ಕೂ ಹೆಚ್ಚು ತಳಿಯ ನಾಯಿಗಳು ಭಾಗಿಯಾಗಿದ್ದವು. ಕರ್ನಾಟಕದ ಹೆಮ್ಮೆಯ ತಳಿ ಮುಧೋಳ ನಾಯಿ ಪ್ರದರ್ಶನದಲ್ಲಿ ಭಾಗಿಯಾಗಿತ್ತು.

Exit mobile version