ಚಾಮರಾಜನಗರ: ಅಕ್ರಮವಾಗಿ ಎಳೆಯಲಾಗಿದ್ದ ವಿದ್ಯುತ್ ತಂತಿ ಬೇಲಿಗೆ ತಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾಡಾನೆಯೊಂದು ಚಿಕಿತ್ಸೆಗೆ ಸ್ಪಂದನೆ ನೀಡಿದ್ದು, ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದೆ.
ಸತತ ನಾಲ್ಕು ಗಂಟೆಗಳ ಚಿಕಿತ್ಸೆಯ ತರುವಾಯ ಕಾಡಾನೆಯು ಜೀವ ಉಳಿಸಿಕೊಳ್ಳಲಿದೆ ಎಂಬ ಆಶಾಭಾವನೆಯನ್ನು ಮೂಡಿಸಿದೆ. ಗುಂಡ್ಲುಪೇಟೆ ತಾಲೂಕು ಬರಗಿ ಸಮೀಪ ಬಂಡೀಪುರ ಓಂಕಾರ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಂಡೀಪುರ ಓಂಕಾರ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಕಾಡಾನೆಯು ವಿದ್ಯುತ್ ತಂತಿಯನ್ನು ಸ್ಪರ್ಶಿಸಿತ್ತು. ತೀವ್ರ ವಿದ್ಯುತ್ ಶಾಕ್ ತಗುಲಿದ್ದರಿಂದ ಆನೆಯು ಸ್ಥಳದಲ್ಲಿಯೇ ಕುಸಿದು ಬಿದ್ದು ಅಸ್ವಸ್ಥಗೊಂಡಿತ್ತು. ಈ ವಿಷಯ ಸ್ಥಳೀಯರಿಗೆ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿಯನ್ನು ನೀಡಿದರು.
ಇದನ್ನೂ ಓದಿ: Karnataka Election: ಸುಮಲತಾ ತಾಯಿ ಬಗ್ಗೆ ನಾನು ಮಾತನಾಡಲ್ಲ; ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಮಾಡಲ್ಲ: ನಿಖಿಲ್ ಕುಮಾರಸ್ವಾಮಿ
ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಕೂಡಲೇ ಅಲ್ಲಿಗೆ ಪಶುವೈದ್ಯರನ್ನು ಕರೆಸಿಕೊಳ್ಳಲಾಯಿತು. ಪಶುವೈದ್ಯರ ತಂಡವು ಅಸ್ವಸ್ಥಗೊಂಡ ಕಾಡಾನೆಗೆ ಸತತವಾಗಿ ಚಿಕಿತ್ಸೆ ನೀಡುತ್ತಾ ಬಂದರು. ಚಿಕಿತ್ಸೆ ಬಳಿಕ ಕಾಡಾನೆಯು ಚೇತರಿಸಿಕೊಂಡಿದ್ದು, ಕಾಡಿನತ್ತ ಸಾಗಿತು. ಇದು ಅಲ್ಲಿ ಸೇರಿದ್ದವರಲ್ಲಿ ಸಮಾಧಾನವನ್ನು ತಂದಿತು.