ಶಿವಮೊಗ್ಗ: ಜಿಲ್ಲೆಯ ಪ್ರಮುಖ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಭದ್ರಾವತಿಯ ಕಡದಕಟ್ಟೆ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 34, ಶಿವಮೊಗ್ಗ ಸವಳಂಗ ರಸ್ತೆಯ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 49, ಕಾಶೀಪುರದ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 54 ಬಳಿಯಲ್ಲಿ ರೈಲ್ವೆ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಶಿವಮೊಗ್ಗ ವಿದ್ಯಾನಗರದ ಬಳಿ ಎಲ್.ಸಿ. 46ಕ್ಕೆ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು ವೀಕ್ಷಿಸಿದ ಸಂಸದರು, ಡಿಸೆಂಬರ್ ಒಳಗೆ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ರೈಲ್ವೆ ಇಲಾಖೆಯ 3 ರಸ್ತೆ ಮೇಲ್ಸೇತುವೆಗಳ ಅಂದಾಜು ವೆಚ್ಚ 116 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕಾಮಗಾರಿ ವೆಚ್ಚದ ಶೇಕಡ 50ರಷ್ಟನ್ನು ಹಾಗೂ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಕಾಮಗಾರಿ ವೆಚ್ಚದ ಶೇಕಡ 50 ರಷ್ಟನ್ನು ರೈಲ್ವೆ ಇಲಾಖೆ ಭರಿಸುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರದ ಪಾಲು 70 ಕೋಟಿ ರೂ. ಆಗಿದ್ದು, ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ 8.61 ಕೋಟಿ ರೂಪಾಯಿಗಳನ್ನು ಹಾಗೂ ಭೂಸ್ವಾಧೀನಕ್ಕಾಗಿ 20.60 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
S.R.C. ಕಂಪನಿಯವರು ಈ 3 ಯೋಜನೆಗಳ ಗುತ್ತಿಗೆ ಪಡೆದಿದ್ದು, ಈಗಾಗಲೇ ಕಾಮಗಾರಿಯು ಶೇ. 30-40ರಷ್ಟು ಮುಗಿದು, ಕಾಮಗಾರಿ ಭರದಿಂದ ಸಾಗುತ್ತಿದೆ. ಶಿವಮೊಗ್ಗ ನಗರದ ವಿದ್ಯಾನಗರ ಬಳಿಯಲ್ಲಿ ಟ್ರoಪ್ಪೆಟ್ ವಿನ್ಯಾಸದ ರೈಲ್ವೆ ಮೇಲ್ಸೇತುವೆ ಕಾಮಗಾರಿ 43.90 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿದೆ. ಮುಂದಿನ ಡಿಸೆಂಬರ್ ತಿಂಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗ ಯೋಜನೆಯನ್ನು 2 ಹಂತಗಳಲ್ಲಿ ಅನುಷ್ಠನಗೊಳಿಸಲು ನಿರ್ಧರಿಸಲಾಗಿದೆ. ಮೊದಲನೇ ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿ ಹಾಗೂ ಎರಡನೇ ಹಂತವು ಶಿಕಾರಿಪುರ-ರಾಣೆಬೆನ್ನೂರು ನಡುವಿನ ಕಾಮಗಾರಿ ನಡೆಯಲಿದೆ. ಶಿವಮೊಗ್ಗ-ಶಿಕಾರಿಪುರ ನಡುವಿನ 54 ಕಿ.ಮೀ.ಗಳ ರೈಲು ಮಾರ್ಗದ ನಿರ್ಮಾಣಕ್ಕಾಗಿ ಒಟ್ಟಾರೆ 388 ಎಕರೆ ಖಾಸಗಿ ಜಮೀನು, 118 ಎಕರೆ ಅರಣ್ಯ ಭೂಮಿ ಹಾಗೂ 45 ಎಕರೆ ಸರ್ಕಾರಿ ಜಮೀನನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ರಾಘವೇಂದ್ರ ತಿಳಿಸಿದರು.
KIADB ಸಂಸ್ಥೆ ಈಗಾಗಲೇ ಎಲ್ಲ ಖಾಸಗಿ ಜಮೀನಿನ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ಸುಮಾರು 220-225 ಎಕರೆ ಭೂಮಿಯ ಮಾಲೀಕರಿಗೆ ಭೂಪರಿಹಾರವನ್ನು ನೀಡಲಾಗಿದೆ. ಉಳಿದವರಿಗೆ ಅವಾರ್ಡ್ ನೋಟಿಸ್ ಜಾರಿಯಾಗಿದೆ. ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಲಾಗಿದ್ದು, ರೈಲ್ವೆ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಕೋಟೆಗಂಗೂರಿನಲ್ಲಿ ಒಟ್ಟು 111.75 ಕೋಟಿ ರೂ. ವೆಚ್ಚದಲ್ಲಿ ಕೋಚಿಂಗ್ ಯಾರ್ಡ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್ ಸಹ ನಿರ್ಮಾಣ ಮಾಡಲಾಗುತ್ತದೆ. ಇದು ಕೂಡ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.
ನಂತರ ಸಂಬಂಧಿಸಿದ ರೈಲ್ವೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಈ ಯೋಜನೆಗಳ ಕ್ಷಿಪ್ರ ಅನುಷ್ಠಾನಕ್ಕಾಗಿ ಅಗತ್ಯವಿರುವ ಕ್ರಮ ಕುರಿತಂತೆ ಚರ್ಚಿಸಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್‌ಪಿ ಬಿ.ಎಂ. ಲಕ್ಷ್ಮಿಪ್ರಸಾದ, ಪಾಲಿಕೆ ಆಯುಕ್ತ ಮಾಯಣ್ಣ, ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ ವಟಾರೆ, ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: GOOD NEWS: ಡಿಸೆಂಬರ್ ವೇಳೆಗೆ ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಸಂಚಾರ ವಿಸ್ತರಣೆ