ಬೆಂಗಳೂರು: ಪ್ರೀತಿಸಿದವಳಿಗೆ ಗೋವಾ ನೋಡಬೇಕೆಂಬ ಆಸೆ. ಆದರೆ ಕೈಯಲ್ಲಿ ನಯಾಪೈಸೆ ಇಲ್ಲದ ಪ್ರಿಯತಮ ಉಂಡ ಮನೆಗೆ ಕನ್ನ (Theft Case) ಹಾಕಿರುವ ಘಟನೆ ನಡೆದಿದೆ. ಮೊಹಮ್ಮದ್ ಇರ್ಫಾನ್ ಎಂಬಾತ ಪ್ರೀತಿಸಿದವಳ ಆಸೆ ಈಡೇರಿಸಲು ಸ್ವಂತ ಅಣ್ಣನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ.
ಸಹೋದರನಿಗೆ ಆಶ್ರಯ ಕೊಟ್ಟಿದ್ದ ಅಣ್ಣನ ಮನೆಯಲ್ಲಿಯೇ ಕೈಚಳಕ ತೋರಿ, ಪ್ರಿಯತಮೆ ಜತೆಗೆ ಗೋವಾದಲ್ಲಿದ್ದಾಗಲೇ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಆರೋಪಿ ಮೊಹಮ್ಮದ್ ಇರ್ಫಾನ್ ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿನ ತನ್ನ ಅಣ್ಣ ಸಲ್ಮಾನ್ ಮನೆಯಲ್ಲಿ ವಾಸವಿದ್ದ. ಸುದ್ದು ಗುಂಟೆಪಾಳ್ಯದಲ್ಲಿ ಸೇಲ್ಸ್ ಮನ್ ಕೆಲಸ ಮಾಡಿಕೊಂಡಿದ್ದ ಸಲ್ಮಾನ್, ಕೆಲಸವಿಲ್ಲದೆ ಓಡಾಡಿಕೊಂಡಿದ್ದ ಇರ್ಫಾನ್‌ಗೆ ಆಶ್ರಯ ನೀಡಿದ್ದರು.
ಹೀಗೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಇರ್ಫಾನ್ ಬೀರುವಿನಲ್ಲಿದ್ದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ನವೆಂಬರ್ 29ರಂದು ಬೀರು ಪರಿಶೀಲಿಸಿದಾಗ ಕಳ್ಳತನ ಬಯಲಾಗಿತ್ತು. 4-5 ದಿನಗಳಿಂದ ಮನೆಗೆ ಬಾರದೇ ಇದ್ದಾಗ ತಮ್ಮ ಇರ್ಫಾನ್ ಮೇಲೆ ಅನುಮಾನಗೊಂಡು ಆಡುಗೋಡಿ ಪೊಲೀಸರಿಗೆ ಸಲ್ಮಾನ್ ದೂರು ನೀಡಿದ್ದರು.
ದೂರಿನನ್ವಯ ತನಿಖೆ ಕೈಗೊಂಡಾಗ ಕಳ್ಳತನದಲ್ಲಿ ಇರ್ಫಾನ್ ಕೈವಾಡ ಇರುವುದು ತಿಳಿದು ಬಂದಿದೆ. ಕದ್ದ ಚಿನ್ನ ಅಡವಿಟ್ಟು ಗೋವಾಗೆ ಹೋಗಿ ಪ್ರೇಯಸಿಯೊಂದಿಗೆ ಮೋಜು ಮಸ್ತಿ ಮಾಡುವಾಗಲೇ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಇದನ್ನೂ ಓದಿ | Hassan Blast | ಮಿಕ್ಸಿ ಬ್ಲಾಸ್ಟ್ ಪ್ರಕರಣ; ಮಹಿಳೆ ಸೇರಿ ಇಬ್ಬರ ತೀವ್ರ ವಿಚಾರಣೆ