ವಿಜಯನಗರ: ಕಳೆದ 2014ರಲ್ಲಿ ನಡೆದಿದ್ದ ಮಾಂಗಲ್ಯ ಸರ ಕಳ್ಳತನ ಪ್ರಕರಣವೊಂದನ್ನು (Theft Case) ಪೊಲೀಸರು ಇದೀಗ ಭೇದಿಸಿದ್ದಾರೆ. ವಿಜಯನಗರದ ಹೊಸಪೇಟೆ ಪಟ್ಟಣ ನೆಕ್ಸ್ಟ್ ಎಲೆಕ್ಟ್ರಾನಿಕ್ ಶೋ ರೂಂ ಸಮೀಪ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದು ಕಿತ್ತುಕೊಂಡು ಭಾಸ್ಕರ್ ಎಂಬಾತ ಪರಾರಿ ಆಗಿದ್ದ.
ಆರೋಪಿ ಭಾಸ್ಕರ್ ವಿರುದ್ಧ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಪಿ.ಐ ರಘುಕುಮಾರ್ ಐಪಿಸಿ ಕಲಂ 392 ದೂರು ದಾಖಲಿಸಿ, ಪಿಐ ಶ್ರೀಧರದೊಡ್ಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಗೀತಾ ಎಸ್.ಮಿರಜಕರ ವಾದ ಮಂಡನೆ ಮಾಡಿದ್ದರು. ಹೊಸಪೇಟೆಯ ಪ್ರಧಾನ ಸಿಜೆ(ಕಿ.ವಿ) ಮತ್ತು ಸಿಎಂಎಫ್.ಸಿ ನ್ಯಾಯಾಲಯದ ನ್ಯಾಯಾದೀಶರಾದ ಬಿ.ಕಿಷನ್ ಮಾಡಲಗಿ ವಿಚಾರಣೆ ನಡೆಸಿ ಆರೋಪಿಗೆ ಎರಡು ವರ್ಷದ ಸಾದಾ ಜೈಲುವಾಸ ಹಾಗೂ 5 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಚಿನ್ನದಂಗಡಿಗೆ ಕನ್ನ ಹಾಕಿದ ಸೇಲ್ಸ್‌ಮ್ಯಾನ್
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿರುವ ಚಿನ್ನದಂಗಡಿಯಲ್ಲಿ ಕೆಲಸ ಮಾಡುವ ಸೇಲ್ಸ್‌ಮ್ಯಾನ್‌ಗಳೇ ಕನ್ನ ಹಾಕಿದ್ದಾರೆ. ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಗಿರೀಶ ಕಾಂತಿ ಎಂಬಾತ 36,81,528 ರೂ ಮೌಲ್ಯದ 643 ಗ್ರಾಂ ಬಂಗಾರ ಕದ್ದು ಪರಾರಿ ಆಗಿದ್ದ. ಕಳ್ಳತನ ನಡೆಯುತ್ತಿದ್ದಂತೆ ಅಂಗಡಿ ಮಾಲೀಕ ಹುಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಗಿರೀಶನನ್ನು ಬಂಧಿಸಿ ಬಂಗಾರ ವಶಪಡಿಸಿಕೊಂಡಿದ್ದಾರೆ.
ಹಗಲು ಹೊತ್ತಿನ ಕಳ್ಳರನ್ನು ಬಂಧಿಸಿದ ಪೊಲೀಸರು
ಹಗಲು ಹೊತ್ತಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ಹಾಗೂ ತಾವರಗೇರಾ ಪೊಲೀಸರು ಬಂಧಿಸಿದ್ದಾರೆ. ಕುಷ್ಟಗಿ ಹಾಗೂ ತಾವರಗೇರಾದಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದವು. ಏಳು ತಿಂಗಳನಿಂದ ಕುಷ್ಟಗಿ ಹಾಗೂ ತಾವರಗೇರಾದಲ್ಲಿ ಕಳ್ಳತನ ಪ್ರಕರಣ ವರದಿಯಾಗುತ್ತಿದ್ದವು. ಹೀಗಾಗಿ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಕಲಬುರಗಿ ಜಿಲ್ಲೆಯ ಮಟಕಿ ಗ್ರಾಮದ ಸಿದ್ದರಾಮ ಪೂಜಾರ, ಮೊಗಾಂಬಿಯ ಗಂಗಾರಾಮ, ಕಂಪ್ಲರ ತಾಂಡಾದ ಗುಲಾಬ್, ಆಳಂದದ ಹೀರಾಚಂದ್ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಬಂಧಿತರಿಂದ 13 ಲಕ್ಷ ರೂಪಾಯಿ ಮೌಲ್ಯದ 246 ಗ್ರಾಂ ಬಂಗಾರ, 91 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ ಹಾಗೂ 5 ಲಕ್ಷ ರೂಪಾಯಿ ಮೌಲ್ಯ ಕಾರು ಸೇರಿ ಒಟ್ಟು 19.09 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕುಖ್ಯಾತ ಮನೆಗಳ್ಳ ಲಾಕ್
ಯಶವಂತಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಮನೆಗಳ್ಳನ ಬಂಧನವಾಗಿದೆ. ಮುದಾಸಿರ್(32) ಬಂಧಿತ ಆರೋಪಿ ಆಗಿದ್ದಾನೆ. ಬೆಂಗಳೂರು, ಬೆಂ.ಗ್ರಾಮಾಂತರ, ಮೈಸೂರು, ಮಂಡ್ಯ ಸೇರಿದಂತೆ ತುಮಕೂರಿನ ಠಾಣೆಗಳಲ್ಲೂ ದೂರು ದಾಖಲಾಗಿದ್ದವು. ಬರೋಬ್ಬರಿ 40ಕ್ಕೂ ಹೆಚ್ಚು ಮನೆ ಕಳವು ಕೇಸ್‌ಗಳಲ್ಲಿ ಭಾಗಿಯಾಗಿದ್ದ, ಒಂದೇ ದಿನದಲ್ಲಿ ಒಂದೇ ಏರಿಯಾದಲ್ಲಿ ಬೀಗ ಹಾಕಿದ್ದ ಮನೆಗಳೇ ಟಾರ್ಗೆಟ್ ಮಾಡುತ್ತಿರುವುದು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Disproportionate Assets: ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆ ಮತ್ತೆ ಒಂದು ವಾರ ವಿಸ್ತರಣೆ
ಸಹಚರರನ್ನು ಕಳ್ಳತನಕ್ಕೆ ಕರೆದೊಯ್ದರೆ ಸಿಕ್ಕಿಬೀಳುವ ಹಿನ್ನೆಲೆ ಮುದಾಸಿರ್ ಏಕಾಂಗಿಯಾಗಿಯೇ ಕಳ್ಳತನಕ್ಕೆ ಇಳಿಯುತ್ತಿದ್ದ. ಮೊದಲ ಮತ್ತು ಎರಡನೇ ಮಹಡಿಗಳನ್ನು ಗುರುತು ಮಾಡಿ ಬಳಿಕ ಬೀಗ ಹಾಕಿದ್ದ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಸದ್ಯ ಯಶವಂತಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.