ಬೆಂಗಳೂರು: ಮೈ ಬಗ್ಗಿಸಿ ದುಡಿಯಲಾರದ ಕೆಲವರು ಅಡ್ಡದಾರಿ ಹಿಡಿದು ಜನರಿಂದ ಸುಲಿಗೆ (Theft Case) ಮಾಡಿ ಹಣ ಮಾಡುತ್ತಾರೆ. ಕೆಲ ಕಳ್ಳಕಾಕರು ಗ್ಯಾಂಗ್ ಕಟ್ಟಿಕೊಂಡು ದರೋಡೆಗಿಳಿದರೆ, ಇಲ್ಲೊಬ್ಬ ಸಿಂಗಲ್ ಆಗಿ ಫೀಲ್ಡಿಗಿಳಿಯುತ್ತಿದ್ದ. ಕೇವಲ ಕ್ಯಾಬ್ ಚಾಲಕರನ್ನೇ (Cab Drivers) ಟಾರ್ಗೆಟ್ ಮಾಡುವ ಈತ ಅದರಲ್ಲೂ ಉತ್ತರ ಕರ್ನಾಟಕದ ಚಾಲಕರನ್ನು ಮಾತ್ರ ಹೆದರಿಸಿ ಅವರಿಂದ ಹಣ ದೋಚಿ ಹೋಗುತ್ತಿದ್ದ. ಖರ್ತನಾಕ್ ಕಳ್ಳನ ಹಿಂದೆ ಬಿದ್ದ ಬಾಣಸವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ಎಚ್‌ಎಎಲ್ ನಿವಾಸಿಯಾದ ವಿನಯ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ.
ಕಳ್ಳ ವಿನಯ್ ಕುಮಾರ್‌ಗೆ ಓದಿಗೆ ತಕ್ಕ ಕೆಲಸ ಸಿಕ್ಕಿರಲಿಲ್ಲ. ಆದರೆ ಕೆಲಸ ಕಾರ್ಯಮಾಡದೆ ಹೋದರೆ ಮನೆಯಲ್ಲಿ ಉಳಿಗಾಲವಿಲ್ಲ ಎಂದು ವಿನಯ್ ಭಾವಿಸಿದ್ದ. ಹೀಗಾಗಿ ದರೋಡೆಗೆ ಇಳಿದಿದ್ದ ವಿನಯ್, ಸಂಜೆಯಾಗುತ್ತಿದ್ದಂತೆ ಪ್ರಯಾಣಿಕರ ಸೋಗಿನಲ್ಲಿ ಓಲಾ, ಊಬರ್ ಕ್ಯಾಬ್ ಬುಕ್ ಮಾಡುತ್ತಿದ್ದ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಲಕರಿಗೆ ಚಾಕು ತೋರಿಸುತ್ತಿದ್ದ. ಅವರ ಬಳಿಯಿರುವ ಹಣವನ್ನು ಮಾತ್ರ ಕಸಿದುಕೊಳ್ಳುತ್ತಿದ್ದ. ಒಂದ್ ವೇಳೆ ಹಣ ಸಾಕಾಗಿಲ್ಲ ಎಂದರೆ ಕ್ಯಾಬ್ ಚಾಲಕರ ಮೊಬೈಲ್‌ನಿಂದ ಸಿಮ್ ಕಾರ್ಡ್ ಕಸಿದುಕೊಳ್ಳುತ್ತಿದ್ದ. ಬಳಿಕ ತನ್ನ ಮೊಬೈಲ್‌ಗೆ ಸಿಮ್ ಕಾರ್ಡ್ ಹಾಕಿಕೊಂಡು, ಗೂಗಲ್ ಪೇ, ಫೋನ್ ಪೇ ಮೂಲಕ ಕ್ಯಾಬ್ ಚಾಲಕರ ಅಕೌಂಟ್‌ನಿಂದ ಹಣವನ್ನು ರವಾನಿಸಿಕೊಂಡು ಅಲ್ಲಿಂದ ಪರಾರಿ ಆಗುತ್ತಿದ್ದ.
ಆಕ್ಸಿಡೆಂಟ್ ನಾಟಕ
ಉತ್ತರ ಕರ್ನಾಟಕ ಭಾಗದ ಚಾಲಕರನ್ನು ಟಾರ್ಗೆಟ್ ಮಾಡುತ್ತಿದ್ದ. ಇದಕ್ಕೆ ಕಾರಣ ಚಾಲಕರು ಭಯದಿಂದ ಪೊಲೀಸ್ ಠಾಣೆ ಮೆಟ್ಟಿಲೇರಲ್ಲ ಎಂದುಕೊಂಡಿದ್ದ. ಕೆಲ ಚಾಲಕರು ಹಣ ಹೋದರೆ ಹೋಗಲಿ ಪ್ರಾಣ ಉಳಿತಲ್ಲ ಎಂದು ಮನೆಗೆ ವಾಪಸ್ ಆಗುತ್ತಿದ್ದರು. ಹೀಗಾಗಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕಳ್ಳ ವಿನಯ್, ಚಾಲಕರ ನಂಬರ್‌ನಿಂದಲೇ ಅವರ ಮನೆಯವರಿಗೆ ಕಾಲ್ ಮಾಡಿ ನಿಮ್ಮ ಕಡೆಯವರಿಗೆ ಆಕ್ಸಿಡೆಂಟ್ ಆಗಿದೆ. ಆಸ್ಪತ್ರೆಗೆ ದಾಖಲು ಮಾಡಿದ್ದೇವೆ, ತುರ್ತಾಗಿ ಹಣ ಬೇಕಿದೆ ಕಳಿಸಿ ಎಂದು ಅಕೌಂಟ್‌ಗೆ ಸಾವಿರಾರು ರೂಪಾಯಿ ಹಾಕಿಸಿಕೊಳ್ಳುತ್ತಿದ್ದ. ಹಣ ಬಂದಕೂಡಲೇ ಸಿಮ್ ಬಿಸಾಕಿ ಹೋಗುತ್ತಿದ್ದ.
ಇದನ್ನೂ ಓದಿ: Viral News: ಚಿಕನ್ ತಿನ್ನಲ್ಲ, ಮಟನ್ ಮುಟ್ಟಲ್ಲ, ರೊಟ್ಟಿಯಂತೂ ತಟ್ಟಂಗಿಲ್ಲ; ಮಳೆಗಾಗಿ ಊರೇ ಬಂದ್!
ಈ ಎಲ್ಲ ಕೃತ್ಯವನ್ನು ಎಸಗುವ ಈತ ಯಾವುದೇ ಸುಳಿವು ಬಿಟ್ಟುಕೊಡುತ್ತಿರಲಿಲ್ಲ. ಸಂಜೆಯಾದ ನಂತರ ಸಿಸಿಟಿವಿ ಇರುವ ಇರುವ ಮಾರ್ಗ ತಪ್ಪಿಸಿ ಕೃತ್ಯವೆಸಗುತ್ತಿದ್ದ. ಆದರೆ ಚಾಲಕನೊಬ್ಬ ದಾಖಲಿಸಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಬಾಣಸವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕು, ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಎಚ್‌ಎಎಲ್, ಬಾಣಸವಾಡಿ, ಹೈ ಗ್ರೌಂಡ್ಸ್, ಎಂ.ಜಿ ರೋಡ್ ಈ ಭಾಗಗಳಿಂದ ಕ್ಯಾಬ್ ಬುಕ್ ಮಾಡಿ ಸುಲಿಗೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ