ಬೆಂಗಳೂರು/ವಿಜಯಪುರ: ತಮಿಳುನಾಡಿನಿಂದ ಕರ್ನಾಟಕ್ಕೆ ಬಂದು ಕಳ್ಳತನ (Theft Case) ಮಾಡುತ್ತಿದ್ದವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಶಾಲಾ-ಕಾಲೇಜುಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು ರಾತ್ರಿ ಹೊತ್ತು ಕೈನಲ್ಲೊಂದು ಚೀಲ ಹಿಡಿದು ಎಂಟ್ರಿ ಕೊಡುತ್ತಿದ್ದರು. ಬಳಿಕ ಕೈಗೆ ಸಿಗುವ ಎಲೆಕ್ಟ್ರಾನಿಕ್ ವಸ್ತುಗಳು, ಲ್ಯಾಪ್‌ಟ್ಯಾಪ್ ಮತ್ತು ನಗದು ಹಣವನ್ನು ದೋಚಿ ಪರಾರಿ ಆಗುತ್ತಿದ್ದರು.
ಅಣ್ಣಾದೊರೈ, ವೀರಮಲೈ ಹಾಗೂ ಬಾಬು ಎಂಬ ಆರೋಪಿಗಳು ಬಂಧಿತರಾಗಿದ್ದಾರೆ. ಮೂಲತಃ ತಮಿಳುನಾಡಿನ ಸೇಲಂನವರಾದ ಇವರು ರಾಜ್ಯಕ್ಕೆ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬರುತ್ತಿದ್ದರು. ಏಕೆಂದರೆ ಜೂನ್‌ನಲ್ಲಿ ಶಾಲಾ- ಕಾಲೇಜು ಪ್ರಾರಂಭ ಆಗುವುದರಿಂದ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಶುರುವಾಗುತ್ತದೆ.
ಈ ವೇಳೆ ಶಾಲಾ-ಕಾಲೇಜು ಶುಲ್ಕದ ಹಣವೆಲ್ಲ ಸಂಗ್ರಹ ಆಗಿರುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಕಳ್ಳತನಕ್ಕೆ ಇಳಿಯುತ್ತಿದ್ದರು. ಹೀಗೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಚೈತನ್ಯ ಮತ್ತು ವಿಎಸ್ಎಸ್ ಶಾಲೆಯಲ್ಲಿ ಕಳ್ಳತನ ಎಸಗಿ ಪರಾರಿ ಆಗಿದ್ದರು. ಜ್ಞಾನಭಾರತಿ, ಹುಳಿಮಾವು, ಕೋಲಾರ ಹಾಗೂ ದಾವಣಗೆರೆ, ಕೆ.ಆರ್ ಪುರಂ, ಆವಲಹಳ್ಳಿ ಸೇರಿದಂತೆ 12 ಕಡೆಗಳಲ್ಲಿ ಕೈ ಚಳಕ ತೋರಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಖದೀಮರನ್ನು ಬಂಧಿಸಿದ್ದಾರೆ. ಬಂಧಿತರಿಂದ ಐದು ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತು ಮತ್ತು ನಗದು ಹಣ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
2001 ರಿಂದ ಶಾಲಾ, ಕಾಲೇಜುಗಳಲ್ಲಿ ಕಳ್ಳತನ ಮಾಡುತ್ತಿದ್ದ ಈ ಖದೀಮರು ಇದುವರೆಗೂ ಪೊಲೀಸರ ಕೈಗೆ ಸಿಗದೇ ಸುಮಾರು 22 ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಆದರೆ ಜ್ಞಾನಭಾರತಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ: Fire Accident: ಮಂಡ್ಯದಲ್ಲಿ 2 ಎಕರೆ ಕಬ್ಬಿನ ಗದ್ದೆಗೆ ಹಬ್ಬಿದ ಬೆಂಕಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ
ವಿಜಯಪುರದಲ್ಲಿ ಹೆಚ್ಚಿದ ಸರಣಿ ಕಳ್ಳತನ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದೆ. ಕರಿಯಸಿದ್ದೇಶ್ವರ ದೇವಸ್ಥಾನದಲ್ಲಿ ಬೀಗ ಮುರಿದು ಸುಮಾರು 20 ತೊಲೆ ಚಿನ್ನ ಕದ್ದಿದ್ದಾರೆ. ದೇವಸ್ಥಾನ ಹತ್ತಿರದ ಪರಶುರಾಮ ಬಂಗಾರಿ ಎಂಬುವವರ ಮನೆಯಲ್ಲಿದ್ದ 80 ಸಾವಿರ ರೂಪಾಯಿ ಹಣ ಕಳ್ಳತನ ಮಾಡಿದ್ದಾರೆ. ಬೀರೇಶ್ವರ ದೇವಸ್ಥಾನ ಹಾಗೂ ಮತ್ತೊಂದು ಮನೆಯ ಬೀಗ ಮುರಿದಿದ್ದು, ಕಳ್ಳತನ ಮಾಡಿದ್ದಾರೆ. ಇಂಡಿ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ