ಬೆಂಗಳೂರು: ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಮೂವರು ಕಳ್ಳರನ್ನು (Theft Case) ಬಂಧಿಸಿ, 1 ಕೋಟಿಗೂ ಹೆಚ್ಚು ಮೌಲ್ಯದ ಎರಡು ಕೆ.ಜಿ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಜಯಂತಿ, ಅಮ್ಜದ್ ಹಾಗು ಮಜುಬಾಯ್ ಎಂಬ ಮೂವರು ಮನೆಗಳ್ಳರನ್ನು ಸಿಸಿಬಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ. ಇವರ ಬಂಧನದಿಂದ ನಗರದಲ್ಲಿ ನಡೆದಿದ್ದ ಒಟ್ಟು 15 ಪ್ರಕರಣಗಳನ್ನು ಬಯಲಿಗೆಳದಂತಾಗಿದೆ.
ಕೃತ್ಯಕ್ಕೆ ಮಗು ಬಳಕೆ
ಜನರಿಗೆ ಅನುಮಾನ ಬಾರದಿರಲಿ ಎಂದು ಕಳ್ಳಿ ಜಯಂತಿ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ಕಳ್ಳತನ ಮಾಡುತ್ತಿದ್ದಳು. ಹೆಬ್ಬಾಳ, ಆರ್‌ಟಿ ನಗರ, ಬಾಣಸವಾಡಿ ಹಾಗು ತಮಿಳುನಾಡಿನ ಸೈದಾ ಪಟ್ಟಣದಲ್ಲಿ ಈ ಖರ್ತನಾಕ್ ಕಳ್ಳಿ ಜಯಂತಿ ಮೇಲೆ ಕಳ್ಳತನ ಪ್ರಕರಣ ದಾಖಲಾಗಿದೆ.
ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದರೂ ಚಾಳಿ ಬಿಡದೆ ಮತ್ತದೆ ಕೃತ್ಯಕ್ಕೆ ಮುಂದಾಗಿದ್ದಾಳೆ. ಮಗುವನ್ನು ಸೊಂಟದಲ್ಲಿಟ್ಟುಕೊಂಡು ಕಳ್ಳತನಕ್ಕೆ ಇಳಿಯುವ ಈಕೆ, ಬೀಗ ಹಾಕಿರುವ ಮನೆಗಳನ್ನು ಹುಡುಕುತ್ತಿದ್ದಳು. ನಂತರ ಯಾರೂ ಬರುವ ಸೂಚನೆ ಇಲ್ಲದೆ ಇದ್ದಾಗ ಮನೆ ಬೀಗ ಮುರಿದು ಕ್ಷಣಾರ್ಧದಲ್ಲಿ ಕಳ್ಳತನ ಮಾಡಿ ಪರಾರಿ ಆಗುತ್ತಿದ್ದಳು. ಪೊಲೀಸರು ಆಕೆಯ ಬೆರಳಚ್ಚು ಮಾಹಿತಿಯಿಂದಾಗಿ ಪತ್ತೆ ಹಚ್ಚಿ ತಮಿಳುನಾಡಲ್ಲಿ ಬಂಧಿಸಿ ಕರೆ ತಂದಿದ್ದಾರೆ. ಆರೋಪಿಯಿಂದ ಸುಮಾರು 350 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಜೋಡಿ ಕೊಲೆಗಾರ ಈಗ ಖರ್ತನಾಕ್ ಕಳ್ಳ
ಎರಡನೇ ಆರೋಪಿ ಅಮ್ಜದ್, ಈತ 2012ರಲ್ಲಿ ಬಾಗಲೂರು ಬಳಿ ಜೋಡಿ ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಬಳಿಕ 2018ರಲ್ಲಿ ಡಕಾಯಿತಿ, ಕಳ್ಳತನ, ಸುಲಿಗೆ ಪ್ರಕರಣದಲ್ಲೂ ಕಂಬಿ ಎಣಿಸಿ ಬಂದಿದ್ದ. ಆದರೂ ಚಾಳಿ ಮುಂದುವರಿಸಿದ್ದವನು ಈಗ ಮತ್ತೆ ಪೊಲೀಸರ ಬಂಧಿ ಆಗಿದ್ದಾನೆ. ಈತನಿಂದ 650 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಚಿನ್ನ ಕದ್ದು ಮಣ್ಣಿನಲ್ಲಿ ಹೂತು ಹಾಕುತ್ತಿದ್ದ ಚಡ್ಡಿ ಗ್ಯಾಂಗ್ ಸದಸ್ಯ
ಮೂರನೇ ಆರೋಪಿ ಚಡ್ಡಿ ಗ್ಯಾಂಗ್ನ ಸದಸ್ಯನಾಗಿರುವ ಮುಜಾಬಾಯ್, ಮೂಲತಃ ಗುಜರಾತ್ನವನು. ರೈಲಿನಲ್ಲಿ ಯಶವಂತಪುರಕ್ಕೆ ಬರುತ್ತಿದ್ದ ಬಳಿಕ ಬಿಎಂಟಿಸಿಯಲ್ಲಿ ತಿರುಗಾಡಿ ಮನೆಗಳ್ಳತನ ಮಾಡುತ್ತಿದ್ದ. ಒಂದು ಮನೆಯಲ್ಲಿ ಕಳ್ಳತನ ಮಾಡಿದರೆ ಅಲ್ಲಿ ಕದ್ದ ಚಿನ್ನವನ್ನು ಮಣ್ಣಿನಲ್ಲಿ ಹೂತು ಹಾಕಿ, ಮತ್ತೊಂದು ಮನೆ ಕಳ್ಳತನಕ್ಕಾಗಿ ಹೋಗುತ್ತಿದ್ದನಂತೆ. ಮೂರ್ನಾಲ್ಕು ಮನೆಗಳಲ್ಲಿ ಕಳ್ಳತನ ಮಾಡಿ ಹೂತಿದ್ದ ಚಿನ್ನಾಭರಣವನ್ನು ತೆಗೆದು ಗುಜರಾತ್ಗೆ ಎಸ್ಕೇಪ್ ಆಗುತ್ತಿದ್ದ. ಇದೇ ರೀತಿ ಗುಜರಾತ್ಗೆ ಹೋಗುವ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಅಲ್ಲಿನ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.
ಮೂವರನ್ನು ಬಂಧಿಸಿ ಕೆ.ಜಿ.ಗಟ್ಟಲೆ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದು, ಇದೇ ವೇಳೆ ಸಾಂಕೇತಿಕವಾಗಿ ಚಿನ್ನದ ಮಾಲೀಕರಿಗೆ ವಾಪಸ್ ನೀಡುವ ಪ್ರಕ್ರಿಯೆ ನಡೆದಿದೆ. ಸದ್ಯ ಆರೋಪಿಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.