Site icon Vistara News

Theft Case: ಚಿನ್ನಾಭರಣ, ಮೊಬೈಲ್‌, ಬೈಕ್‌ ಕದ್ದವರನ್ನು ಬಂಧಿಸಿದ ಬೆಂಗಳೂರು ಪೊಲೀಸ್; ಶಿವಮೊಗ್ಗದಲ್ಲಿ ಮಚ್ಚೆ ಗೂಬೆಗಳ ಮಾರಾಟಕ್ಕೆ ಯತ್ನ

#image_title

ಬೆಂಗಳೂರು: ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ (Theft Case) ಮಾಡುತ್ತಿದ್ದ ಆರೋಪಿಗಳನ್ನು ಕೆಂಗೇರಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಬ್ಬಾಳು ಚಂದು, ಕುಳ್ಳ ರಘು ಬಂಧಿತ ಆರೋಪಿಗಳಾಗಿದ್ದು, ಆರು ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ.

ಬೆಳಗಿನ ಹೊತ್ತು ವಾಕಿಂಗ್ ಮಾಡಲು ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಈ ಆರೋಪಿಗಳು ಹೊಂಚು ಹಾಕಿ ಬೈಕ್‌ನಲ್ಲಿ ಬಂದು ಚಿನ್ನದ ಸರವನ್ನು ಕಸಿದು ಪರಾರಿ ಆಗುತ್ತಿದ್ದರು. ಇತ್ತೀಚೆಗೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್‌ ಕಳ್ಳರು ಬಂಧನ

ಅನ್ನಪೂರ್ಣೇಶ್ವರ ನಗರ ಪೊಲೀಸರ ಕಾರ್ಯಾಚರಣೆಯಿಂದಾಗಿ ಇಬ್ಬರು ಮೊಬೈಲ್ ಕಳ್ಳರನ್ನು ಬಂಧನ ಮಾಡಲಾಗಿದೆ. ರಾಜಕುಮಾರ್ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದಾರೆ. ರಸ್ತೆಲ್ಲಿ ಮೊಬೈಲ್‌ ಹಿಡಿದು ಮಾತನಾಡಿಕೊಂಡು ಹೋಗುವರನ್ನು ಟಾರ್ಗೇಟ್‌ ಮಾಡುತ್ತಿದ್ದರು. ಬಂಧಿತರಿಂದ 3 ಮೊಬೈಲ್ ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಬೈಕ್‌ ಕಳ್ಳರ ಬೆನ್ನು ಹತ್ತಿದ ಪೊಲೀಸರು

ನಗರದಲ್ಲಿ ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು ಇಬ್ಬರು ಬೈಕ್ ಚೋರರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ನೆಲಮಂಗಲ ಟೌನ್ ಠಾಣಾ ಪೋಲೀಸರು ಕಾರ್ಯಚರಣೆ ನಡೆಸಿ, ನೆಲಮಂಗಲ ಸಮೀಪದ ಅರಿಶಿನಕುಂಟೆ ಫ್ಲೈ ಓವರ್ ಬಳಿ ಬೈಕ್ ಕದಿಯಲು ಹೊಂಚು ಹಾಕುತ್ತಿದ್ದಾಗಲೇ ಮಹೇಂದ್ರ ಚಕ್ರವರ್ತಿ (23) ಅಭಿಷೇಕ್ (20) ಎಂಬುವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಕದ್ದ 4.70 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನಗಳು ಮತ್ತು 3 ಮೊಬೈಲ್‌ಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಬೆಂಗಳೂರು ಗ್ರಾಮಾಂತರ, ತುಮಕೂರು, ದೊಡ್ಡಬಳ್ಳಾಪುರ ಸೇರಿದಂತೆ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕೈಚಳಕ ತೋರಿದ್ದು ಬೆಳಕಿಗೆ ಬಂದಿದೆ.

ಮಚ್ಚೆ ಗೂಬೆಗಳ ಅಕ್ರಮ ಮಾರಾಟ ಯತ್ನ

ಶಿವಮೊಗ್ಗದಲ್ಲಿ ಕಲ್ಲೂಪುರ ಗ್ರಾಮದ ಬಳಿ ಮಚ್ಚೆ ಗೂಬೆಗಳ ಅಕ್ರಮ ಮಾರಾಟಕ್ಕೆ ಯತ್ನಿಸಿದವರನ್ನು ಮಾಲು ಸಮೇತ ಇಬ್ಬರನ್ನು ಸಾಗರದ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದ್ದಾರೆ. ಆಂಜನಪ್ಪ (39) ಮಂಜುನಾಥ್ (50) ಬಂಧಿತ ಆರೋಪಿಗಳು.

ಚುಕ್ಕೆಯುಳ್ಳ ಎರಡು ಗೂಬೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, 1972ರ ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ದೂರು ದಾಖಲಾಗಿದೆ. ಇಬ್ಬರೂ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: Tiger attack: ಕೊಡಗಿನಲ್ಲಿ ನರಹಂತಕ ವ್ಯಾಘ್ರನ ಶೂಟ್‌ ಮಾಡಿ ಕೊಲ್ಲಲು ಆಗ್ರಹ; ಕಾಡಲ್ಲೇ ಶವ ಇಟ್ಟು ಪ್ರತಿಭಟನೆ

Exit mobile version