Site icon Vistara News

Theft Case : ಬೆಂಗಳೂರಿಗರೇ ಎಚ್ಚರ; ಖಾಕಿ ಡ್ರೆಸ್‌ನಲ್ಲಿ ಬಂದು ದರೋಡೆ ಮಾಡ್ತಾರೆ ಹುಷಾರ್‌!

Theft case

ಬೆಂಗಳೂರು: ಆ ಉದ್ಯಮಿ ಮನೆಯವರು ಇನ್ನೇನು ರಾತ್ರಿ ಊಟ ಮುಗಿಸಿ ನಿದ್ರೆಗೆ ಜಾರುವವರಿದ್ದರು. ಆದರೆ ಅದೇ ಸಮಯಕ್ಕೆ ಮನೆ ಡೋರ್‌ನ ಕಾಲಿಂಗ್‌ ಬೆಲ್‌ ಬಡಿದುಕೊಂಡಿತ್ತು. ಯಾರೆಂದು ನೋಡಿದಾಗ ಎದುರಿಗೆ ನಾಲ್ಕೈದು ಮಂದಿ ಪೊಲೀಸ್‌ ಸಮವಸ್ತ್ರದಲ್ಲಿ ಬಂದಿದ್ದರು. ಪೊಲೀಸರಲ್ವಾ ಎಂದು ಆ ಮನೆಯವರು ಮನೆ ಬಾಗಿಲು ತೆರೆದಿದ್ದು ಅಷ್ಟೇ.., ರಾಜಾರೋಷವಾಗಿ ಮನೆಯೊಳಗೆ ನುಗ್ಗಿದ್ದರು. ಏಕಾಏಕಿ ಮಾರಕಾಸ್ತ್ರಗಳನ್ನು ತೋರಿಸಿ ಕ್ಷಣಾರ್ಧದಲ್ಲಿ ದರೋಡೆ (theft Case) ಮಾಡಿ ಪರಾರಿ ಆಗಿದ್ದರು.

ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯ ಎಚ್‌.ಎಂ.ಟಿ ಲೇಔಟ್‌ನಲ್ಲಿ ಪೊಲೀಸರ ಸೋಗಿನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕಳ್ಳರು ದರೋಡೆ ಮಾಡಿದ್ದಾರೆ. ಖಾಸಗಿ ಕಂಪನಿ ಮಾಲೀಕ ಮನೋಹರ್ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ. ಮನೆಯಲ್ಲಿದ್ದ ಸುಮಾರು 700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ರೂ. ನಗದು ಕದ್ದು ಪರಾರಿ ಆಗಿದ್ದಾರೆ.

ಉದ್ಯಮಿ ಮನೋಹರ್ ಮನೆಯಲ್ಲಿ ಇಲ್ಲದ ವೇಳೆ ಈ ಕಳ್ಳತನ ನಡೆದಿದೆ. ಮನೋಹರ್ ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಮನೆಯಲ್ಲಿದ್ದರು. ಈ ವೇಳೆ ಪೊಲೀಸ್ ಡ್ರೆಸ್‌ನಲ್ಲಿ ಮನೆಗೆ ನುಗ್ಗಿದ್ದಾರೆ. ಉದ್ಯಮಿ ಮನೋಹರ್‌ರ ಅಣ್ಣ-ತಮ್ಮಂದಿರ ನಡುವೆ ಹಲವು ಪ್ರಕರಣಗಳಿದ್ದವು. ಹೀಗಾಗಿ ಅದೇ ವಿಚಾರಕ್ಕೆ ಪೊಲೀಸರು ಬಂದಿರಬಹುದು ಎಂದುಕೊಂಡು ಸುಜಾತ ಮನೆ ಡೋರ್‌ ತೆರೆದಿದ್ದರು. ಪೊಲೀಸರ ಸೋಗಿನಲ್ಲಿ ಮನೆಯೊಳಗೆ ಕಾಲಿಟ್ಟ ಕಳ್ಳರು ಕ್ಷಣ ಮಾತ್ರದಲ್ಲಿ ತಮ್ಮ ನಿಜ ಸ್ವರೂಪವನ್ನು ತೋರಿದ್ದರು.

ಇದನ್ನೂ ಓದಿ: Elephant Arjuna : ಅಧಿಕಾರಿಗಳ ಗುಂಡಿನಿಂದಲೇ ಅರ್ಜುನನ ಮರಣ?; ಇಲ್ಲಿದೆ ವಿಡಿಯೊ ಸಾಕ್ಷಿ

ನೋಡನೋಡುತ್ತಿದ್ದಂತೆ ಈ ಮೊದಲೇ ತಂದಿದ್ದ ಡ್ರ್ಯಾಗರ್ ಹಾಗೂ ಮಚ್ಚುಗಳನ್ನು ಹೊರತೆಗೆದು ಮನೆಯೊಳಗೆ ಇದ್ದವರನ್ನು ಹೆದರಿಸಲು ಶುರು ಮಾಡಿದ್ದರು. ಈ ವೇಳೆ ಉದ್ಯಮಿ ಪುತ್ರ ರೂಪೇಶ್ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದರು. ಆದರೆ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಮನೆಯಲ್ಲಿ ಇದ್ದವರನ್ನೆಲ್ಲ ಲಾಕ್‌ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಲೂಟಿ ಮಾಡಿದ್ದಾರೆ.

ಮಾತ್ರವಲ್ಲದೆ ಕೃತ್ಯ ಎಸಗಿದ ಬಳಿಕ ಸಿಕ್ಕಿಹಾಕಿಕೊಳ್ಳಬಾರದೆಂದು ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಸಮೇತ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಸುಮಾರು 5 ರಿಂದ 6 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ರೂಪೇಶ್‌ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯ ಅಕ್ಕ ಪಕ್ಕದ ಸಿಸಿಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಮೊಬೈಲ್‌ ಅಂಗಡಿಗೆ ಕನ್ನ

ರಾಯಚೂರಿನ ಸಿಂಧನೂರಿನ ಬಸ್ ನಿಲ್ದಾಣದ ಬಳಿ ಇದ್ದ ಮೊಬೈಲ್‌ ಅಂಗಡಿಗೆ ಖದೀಮರು ಕನ್ನ ಹಾಕಿದ್ದಾರೆ. ಎಸ್‌ಆರ್‌ಕೆ ಮೊಬೈಲ್ ಶಾಪ್‌ನ ಬೀಗ ಮುರಿದು, ಸುಮಾರು 53ಕ್ಕೂ ಹೆಚ್ಚು ಮೊಬೈಲ್‌ಗಳನ್ನು ‌ಕಳವು ಮಾಡಿದ್ದಾರೆ. ಅಂಗಡಿಯೊಳಗೆ ಇದ್ದ ಸಿಸಿಟಿವಿಯನ್ನು ಬೇರೆ ಕಡೆ ತಿರುಗಿಸಿ ಕಳ್ಳತನ ಮಾಡಿದ್ದಾರೆ. ಮಾಹಿತಿ ತಿಳಿದು ಮೊಬೈಲ್ ಅಂಗಡಿಗೆ ಸಿಂಧನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version