ಬೆಂಗಳೂರು: ಆ ಚಾಲಕ ಸಾಲಸೋಲ ಮಾಡಿ ಆಟೋವೊಂದನ್ನು ಖರೀದಿಸಿದ್ದರು. ಹಗಲು- ರಾತ್ರಿ ಎನ್ನದೆ ಆಟೋ ಓಡಿಸಿ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು. ಆದರೆ ಅದೊಂದು ದಿನ ಚಾಲಕನ ಸಮಯ ಕೆಟ್ಟಿತ್ತು. ಬಾಡಿಗೆ ಮುಗಿಸಿಕೊಂಡು ಮನೆಗೆ ತೆರಳುವಾಗ ನಿಯಂತ್ರಣ ತಪ್ಪಿ ಆಟೋ (road Accident) ಪಲ್ಟಿಯಾಗಿತ್ತು. ಗಾಯಗೊಂಡು ನರಳಾಡುತ್ತಿದ್ದ ಚಾಲಕನನ್ನು ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಖತರ್ನಾಕ್ ಖದೀಮರು ಆಕ್ಸಿಡೆಂಟ್ ಆದ ಆಟೋವನ್ನು ಬಿಡದೆ ಎಗರಿಸಿ (Theft Case) ಪರಾರಿ ಆಗಿದ್ದಾರೆ. ಬಡಪಾಯಿ ಆಟೋ ಚಾಲಕ ನಿತಿನ್ ಕಂಗಲಾಗಿದ್ದು, ಠಾಣೆಗೆ ಅಲೆದಾಡುತ್ತಿದ್ದಾರೆ.
ಕಳೆದ ಸೆಪ್ಟೆಂಬರ್ 3ರ ರಾತ್ರಿ ಚಾಲುಕ್ಯ ಸರ್ಕಲ್ ಕಡೆಯಿಂದ ಹೈಗ್ರೌಂಡ್ಸ್ ಜಂಕ್ಷನ್ ಕಡೆಗೆ ವೇಗವಾಗಿ ಹೋಗುವಾಗ ನಿಯಂತ್ರಣ ತಪ್ಪಿ ಆಟೊ ಪಲ್ಟಿ ಹೊಡೆದಿತ್ತು. ಗಾಯಗೊಂಡಿದ್ದ ಚಾಲಕ ನಿತಿನ್ನನ್ನು ಸಾರ್ವಜನಿಕರು ಉಪಚರಿಸಿ ಮತ್ತೊಂದು ಆಟೋ ಮೂಲಕ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: Road Accident : ಬ್ರೇಕ್ ಫೇಲ್ ಆಗಿ ಕಂದಕಕ್ಕೆ ಉರುಳಿದ ಕೆಎಸ್ಆರ್ಟಿಸಿ ಬಸ್; ಪ್ರಯಾಣಿಕರಿಗೆ ಗಾಯ
ಚಿಕಿತ್ಸೆ ಪಡೆದು ಎರಡು ಗಂಟೆ ಬಳಿಕ ಅಪಘಾತವಾದ ಸ್ಥಳಕ್ಕೆ ಬಂದು ನೋಡಿದರೆ ಆಟೋ ನಾಪತ್ತೆಯಾಗಿತ್ತು. ಚಾಲಕ ನಿತಿನ್ ಸುತ್ತಮುತ್ತ ಆಟೋಗಾಗಿ ಹುಡುಕಾಡಿದ್ದಾರೆ. ನಂತರ ಟ್ರಾಫಿಕ್ ಪೊಲೀಸರ ಬಳಿಯೂ ವಿಚಾರಿಸಿದಾಗ ಆಟೊ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಬೆಂಗಳೂರಿನ ವರ್ತೂರಿನ ಕಾವೇರಿನಗರದಲ್ಲಿ ವಾಸವಾಗಿರುವ ನಿತಿನ್ ಹಲವು ವರ್ಷಗಳಿಂದ ಆಟೊ ಓಡಿಸಿ ಜೀವನ ನಡೆಸುತ್ತಿದ್ದಾರೆ. ಕಳೆದ 2 ತಿಂಗಳ ಹಿಂದಷ್ಟೇ ಫೈನಾನ್ಸ್ ಮೇಲೆ 3.35 ಲಕ್ಷ ನೀಡಿ ಆಟೊ ಖರೀದಿಸಿದ್ದರು. ಪ್ರತಿ ತಿಂಗಳು 10 ಸಾವಿರ ರೂ ಇಎಂಐ ಪಾವತಿಸುತ್ತಿದ್ದಾರೆ. ಆಟೋ ಹುಡುಕಿ ಸುಸ್ತಾಗಿರುವ ನಿತಿನ್ ಅಂತಿಮವಾಗಿ ಆಟೋ ಕಳ್ಳತನವಾಗಿದೆ ಎಂದು ಭಾವಿಸಿ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತವಾದ ಸ್ಥಳದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ