ಬೆಂಗಳೂರು: ಇಲ್ಲಿನ ಕುಂಬಾರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನ (Dharmarayaswamy Temple) ಸಮೀಪ ಚಿನ್ನದ ವ್ಯಾಪಾರಿಯೊಬ್ಬರಿಗೆ ನಕಲಿ ಜ್ಯೋತಿಷಿಗಳು (Fake astrologer) ಭವಿಷ್ಯ ಹೇಳುವ ನೆಪದಲ್ಲಿ ಆತನ ಬಳಿಯಿದ್ದ 73 ಗ್ರಾಂ ಚಿನ್ನದ ಗಟ್ಟಿಯನ್ನು ದೋಚಿ ಪರಾರಿ (Theft Case) ಆಗಿರುವ ಘಟನೆ ಕುಂಬಾರಪೇಟೆ ಸಮೀಪ ನಡೆದಿದೆ.
ಓಂ ಗೋಲ್ಡ್ ಎಂಬ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಮನ್ ಸರ್ಕಾರ್ (20) ಎಂಬಾತನ ಬಳಿ ಬಂಗಾಲಿ ಬಾಬ ಎಂದು ಹೇಳಿದ ನಯವಂಚಕರು ಕೈ ರೇಖೆ ನೋಡಿ ಭವಿಷ್ಯ ಹೇಳುವುದಾಗಿ ನಂಬಿಸಿ ವಂಚಿಸಿದ್ದಾರೆ. ಕಳೆದ ಮಾರ್ಚ್ 27ರ ಮಧ್ಯಾಹ್ನ 3.30ರ ಸುಮಾರಿಗೆ ಮಾಲೀಕನ ಅಣತಿಯಂತೆ 75 ಗ್ರಾಂ ಚಿನ್ನವನ್ನು ಟೆಸ್ಟಿಂಗ್ ಮಾಡಿಸುವ ಸಲುವಾಗಿ ಸುಮನ್ ಚಿನ್ನದ ಗಟ್ಟಿಯನ್ನು ಬಾಲಾಜಿ ಗೋಲ್ಡ್ ಟೆಸ್ಟಿಂಗ್ ಅಂಗಡಿಗೆ ತೆಗೆದುಕೊಂಡು ಹೋಗಿದ್ದರು.
ಟೆಸ್ಟ್ ಮಾಡಿಸಿ ಸುಮನ್ ವಾಪಸ್ ಬರುವಾಗ ಗಾಣಿಗರ ಸಿ ಲೇನ್ ಹತ್ತಿರ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಇವರದ್ದೇ ಬಂಗಾಳಿ ಭಾಷೆಯಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ನಾವುಗಳು ಬಂಗಾಲಿ ಜ್ಯೋತಿಷಿಗಳು ನಿನ್ನ ಕೈ ರೇಖೆಯನ್ನು ನೋಡಿ ಭವಿಷ್ಯ ಹೇಳುತ್ತೇವೆ ಎಂದು ನಂಬಿಸಿದ್ದಾರೆ. ಬಳಿಕ ನಮ್ಮೊಂದಿಗೆ ಬಂದರೆ ಕೈ ನೋಡಿ ಒಳ್ಳೆಯ ಮಂತ್ರಿಸಿದ ದಾರವನ್ನು ಕೊಡುವುದಾಗಿ ಹೇಳಿದ್ದಾರೆ.
ನಕಲಿ ಜ್ಯೋತಿಷಿಗಳ ಮಾತಿಗೆ ಮರುಳಾದ ಸುಮನ್ ಅವರೊಟ್ಟಿಗೆ ಹೋಗಿದ್ದಾರೆ. ಕುಡಿಯಲು ಯಾವುದೋ ನೀರನ್ನು ತೀರ್ಥ ಎಂದು ನೀಡಿದ್ದು ಬಳಿಕ ಏನಾಗುತ್ತಿದೆ ಎಂದು ತಿಳಿಯದ ಸುಮನ್, ನಕಲಿ ಜ್ಯೋತಿಷಿಗಳು ಹೇಳಿದ ಹಾಗೇ ಕೇಳಲು ಶುರು ಮಾಡಿದ್ದಾರೆ. ಬಳಿ ಇಟ್ಟುಕೊಂಡಿದ್ದ ಚಿನ್ನದ ಗಟ್ಟಿಯನ್ನು ಕೊಡು ಎಂದು ಕೇಳಿದ ಕೂಡಲೇ ಅರಿವಿಗೆ ಬಾರದೆ ತಂದಿದ್ದ 75 ಗ್ರಾಂ ಚಿನ್ನವನ್ನು ಕೊಟ್ಟಿದ್ದಾರೆ. ನಂತರ ವಂಚಕರು ಈತನಿಗೆ 100 ಹೆಜ್ಜೆ ಮುಂದಕ್ಕೆ ಹೋಗಿ ವಾಪಸ್ ಬರುವಂತೆ ತಿಳಿಸಿದ್ದಾರೆ. ಅವರು ಹೇಳಿದಂತೆ ಸ್ವಲ್ಪ ಮುಂದೆ ನಡೆದು ಹೋಗಿ ಹಿಂದಿರುಗಿ ನೋಡುವಷ್ಟರಲ್ಲಿ, ಆ ವ್ಯಕ್ತಿಗಳು ಪರಾರಿ ಆಗಿದ್ದಾರೆ. ಆಗಲೇ ಸುಮನ್‌ಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: Road accident : ತಿರುವಿನಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಸದ್ಯ ನಕಲಿ ಜ್ಯೋತಿಷಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.