ಬೆಂಗಳೂರು: ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹೋದರನ ಮನೆಗೆ ನುಗ್ಗಿ ಕನ್ನ ಹಾಕಿ (Theft Case) ಪರಾರಿ ಆಗಿದ್ದ ನೇಪಾಳಿ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 30ರಂದು ಯುರೋಪ್ ಪ್ರವಾಸ ಮುಗಿಸಿ ಬಂದಿದ್ದ ಬ್ರಹ್ಮೇಶ್ ಕುಟುಂಬಕ್ಕೆ ಅಘಾತ ಕಾದಿತ್ತು. ಮನೆಯಲ್ಲಿದ್ದ ಐದು ಕೆ.ಜಿ. ಚಿನ್ನಾಭರಣವನ್ನು ಕಳ್ಳರು ಕದ್ದು ಪರಾರಿ ಆಗಿದ್ದರು. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ತಿಂಗಳ ನಂತರ ಆರೋಪಿಗಳನ್ನು ಬಂಧಿಸಿದ್ದಾರೆ. ನೇಪಾಳಿ ಮೂಲದ ಪಾರ್ವತಿಶಾಹಿ, ಶಾಲದ ಶಾಹಿ, ನಾರಾ ಬಹದ್ದೂರ್ ಶಾಹಿ, ಸ್ವಸ್ತಿಕ್ ಶಾಹಿ, ಖಾಕೇಂದ್ರ ಬಹದ್ದೂರ್ ಶಾಹಿ, ಕೋಮಲ್ ಶಾಹಿ ಹಾಗೂ ಉಪೇಂದ್ರ ಬಹದ್ದೂರ್ ಶಾಹಿ ಬಂಧಿತ ಆರೋಪಿಗಳಾಗಿದ್ದಾರೆ.
ಕಳ್ಳತನಕ್ಕೆ ಮೂರು ತಿಂಗಳಿಂದ ಪ್ಲ್ಯಾನ್
ಬ್ರಹ್ಮೇಶ್ ಮನೆಯ ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡವಿತ್ತು. ಇಲ್ಲೆ ಕೆಲಸಕ್ಕಿದ್ದ ಈ ನೇಪಾಳಿ ಗ್ಯಾಂಗ್ ಕಳ್ಳತನಕ್ಕಾಗಿ ಮಾಸ್ಟರ್ ಪ್ಲ್ಯಾನ್ ಹಾಕಿದ್ದರು. ಒಂದಲ್ಲ, ಎರಡಲ್ಲ ಮೂರು ತಿಂಗಳ ಕಾಲ ಕಾದು ಕುಳಿತು ಕಳ್ಳತನವನ್ನು ಮಾಡಿದ್ದರು. ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬ್ರಹ್ಮೇಶ್ ಮನೆಗೆ ಜಂಪ್ ಮಾಡಿ ಕಳ್ಳತನ ಮಾಡಿದ್ದರು.
ಇದನ್ನೂ ಓದಿ: PM Narendra Modi: ಪ್ರಧಾನಿಗೆ ಪ್ರತಿದಿನ ಪತ್ರ ಬರೆಯುವ ಮಹಿಳೆ! ಇದುವರೆಗಿನ ಪತ್ರಗಳ ಸಂಖ್ಯೆ 264 ! ಏನಿರುತ್ತೆ ಅದ್ರಲ್ಲಿ?
ಕಳ್ಳತನಕ್ಕೆ ದಾರಿ ಮಾಡಿಕೊಟ್ಟ ಫೇಸ್‌ಬುಕ್ ಫೋಟೊ
ಕಳ್ಳತನಕ್ಕೆ ಸುಲಭ ದಾರಿ ಮಾಡಿಕೊಟ್ಟಿದ್ದೆ ಫೇಸ್‌ಬುಕ್ ಫೋಟೊ. ಹೌದು ರಾಕ್‌ಲೈನ್ ವೆಂಕಟೇಶ್ ತಮ್ಮ ಬ್ರಹ್ಮೇಶ್ ಕುಟುಂಬ ಯುರೋಪ್ ಪ್ರವಾಸಕ್ಕೆಂದು ಹೋದಾಗ ತಮ್ಮ ಫೇಸ್‌ಬುಕ್‌ನಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದರು. ಇದುವೇ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಿತ್ತು. ಮನೆಯಲ್ಲಿ ಯಾರು ಇಲ್ಲದನ್ನು ಫೋಟೊ ನೋಡಿ ಖಾತ್ರಿ ಪಡಿಸಿಕೊಂಡ ಈ ಕಳ್ಳರು ಕ್ಷಣಾರ್ಧದಲ್ಲಿ ಕೋಟ್ಯಾಂತರ ರೂ. ಮೌಲ್ಯದ 5.5 ಕೆಜಿ ಚಿನ್ನಾಭರಣ ದೋಚಿ ಪರಾರಿ ಆಗಿದ್ದರು.
ಇತ್ತ ಪ್ರವಾಸ ಮುಗಿಸಿ ವಾಪಾಸ್ ಬಂದಾಗ ಬ್ರಹ್ಮೇಶ್ ಕುಟುಂಬಕ್ಕೆ ಶಾಕ್ ಕಾದಿತ್ತು. ಮನೆ ಬಾಗಿಲು ತೆರೆಯುತ್ತಿದ್ದಂತೆ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೋಟ್ಯಾಂತರ ಬೆಲೆ ಬಾಳುವ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಕೊಂಡ ಪೊಲೀಸರು ಮೂವರು ಮಹಿಳೆಯರು ಹಾಗೂ ನಾಲ್ವರು ಪುರಷರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಂದೂವರೆ ಕೋಟಿ ಮೌಲ್ಯದ 3.1 ಕೆಜಿ ಬಂಗಾರ ವಶಕ್ಕೆ ಪಡೆಯಲಾಗಿದೆ.
ಪ್ರಮುಖ ಆರೋಪಿ ಮೇಲೆ ಸುಮಾರು 15 ಪ್ರಕರಣ ದಾಖಲಾಗಿದ್ದು, ಅಂತರರಾಜ್ಯ ಮನೆಗಳ್ಳನಾಗಿದ್ದಾನೆ. ಇನ್ನು ಸಾರ್ವಜನಿಕರು ಹೊರ ದೇಶಕ್ಕೆ ಹೋಗುವ ಸಮಯ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಒಳ್ಳೆಯದು. ಮನೆ ಬಾಗಿಲಿಗೆ ಪೇಪರ್ ಹಾಗೂ ಹಾಲು ಹಾಕಿಸಿಕೊಳ್ಳುತ್ತಿದ್ದರೆ, ಪೇಪರ್ ಹಾಕದಂತೆ ಹೇಳಿದರೆ ಕಳ್ಳತನ ತಪ್ಪಿಸಬಹುದಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸಲಹೆ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ