Site icon Vistara News

Theft Case : ಫ್ರೀ ಬಸ್‌ ಎಫೆಕ್ಟ್‌;15 ತೊಲೆ ಬಂಗಾರ ಎಗರಿಸಿದ ಚಲಾಕಿ ಕಳ್ಳರು

theft case in gadag

ಗದಗ: ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ ಎಲ್ಲ ಬಸ್‌ ನಿಲ್ದಾಣದಲ್ಲೂ ಮಹಿಳಾ ಪ್ರಯಾಣಿಕರೇ ತುಂಬಿ ತುಳುಕುತ್ತಿರುತ್ತಾರೆ. ವಾರಾಂತ್ಯದಲ್ಲಿ ಕಾಲಿಡಲು ಆಗದಷ್ಟು ಎಲ್ಲ ಬಸ್‌ ಫುಲ್‌ ಆಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಖದೀಮರು, ಬಸ್‌ ಹತ್ತುವ ನೆಪದಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿ ಕಳ್ಳತನ (Theft Case) ಮಾಡುತ್ತಿದ್ದಾರೆ. ಸದ್ಯ ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ಕಳ್ಳರು ಎಗರಿಸಿದ್ದಾರೆ.

ಡಿ.22ರಂದು ಕೊಪ್ಪಳ ಮೂಲದ ಮಹಿಳೆಯೊಬ್ಬರು ಗದಗ ಮಾರ್ಗವಾಗಿ ಹಾನಗಲ್ಲ ಪಟ್ಟಣಕ್ಕೆ ತೆರಳುತ್ತಿದ್ದರು. ಬಸ್‌ಗಾಗಿ ಕಾಯುತ್ತಿದ್ದಾಗ ಗದಗದ ಹೊಸ ಬಸ್ ನಿಲ್ದಾಣದ ಅಂಗಡಿಯೊಂದರಲ್ಲಿ ಚಿನ್ನದ ಬ್ಯಾಗ್ ಇಟ್ಟು ವಾಶ್ ರೂಮಿಗೆ ತೆರಳಿದ್ದರು. ಆದರೆ ವಾಪಸ್ ಬರುವಷ್ಟರಲ್ಲಿ ಬ್ಯಾಗನಲ್ಲಿದ್ದ ಆಭರಣಗಳ ಡಬ್ಬಿ ಕಾಣೆಯಾಗಿತ್ತು.

ಇದನ್ನೂ ಓದಿ: Lorry Fire : ಅಡುಗೆ ಮಾಡುವಾಗ ಸ್ಟವ್ ಸ್ಫೋಟ; ಬೆಂಕಿ ತಗುಲಿ ಹೊತ್ತಿ ಉರಿದ ಲಾರಿ, ಚಾಲಕನಿಗೆ ಗಾಯ

ಇತ್ತ ಇದರ ಅರಿವು ಇರದ ಮಹಿಳೆ ಆತುರವಾಗಿ ಹಾನಗಲ್‌ ಮಾರ್ಗದ ಬಸ್ ಏರಿದ್ದಾಳೆ. ರಶ್‌ ಇದ್ದ ಬಸ್‌ ಏರಿ ಸೀಟು ಹಿಡಿದು ಕೂತು ನಂತರ ಬ್ಯಾಗ್‌ ಚೆಕ್‌ ಮಾಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಬ್ಯಾಗ್‌ನಲ್ಲಿದ್ದ ಚಿನ್ನಾಭರಣದ ಬಾಕ್ಸ್ ಮಿಸ್ ಆಗಿದ್ದನ್ನು ತಿಳಿದು ಕೂಡಲೇ ಬಸ್ಸಿನಿಂದ ಕೆಳಗೆ ಇಳಿದಿದ್ದಾಳೆ.

ಬಸ್ ನಿಲ್ದಾಣದಲ್ಲಿದ್ದ ಅಂಗಡಿ ಮಾಲೀಕನ ಬಳಿ ವಿಚಾರಿಸಿದ್ದಾಳೆ. ಆದರೆ ಅಂಗಡಿಯವರು, ನಾನು ಅಯ್ಯಪ್ಪನ‌ ಮಾಲೆ ಹಾಕಿದ್ದೀನಿಮ್ಮಾ. ನಾನು ಅಂತಹ ಕೆಲಸ ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಳಿಕ ದಿಕ್ಕು ತೋಚದೆ ಮಹಿಳೆ 112 ಕರೆ ಮಾಡಿ ವಿಷಯ ಮುಟ್ಟಿಸಿದ್ದಾಳೆ.

ಇದನ್ನೂ ಓದಿ: Car Fire : ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಕಾರು; ಚಾಲಕ ಸಜೀವ ದಹನ

ಸಹೋದರ ಮದುವೆಗೆ ಹೋಗುತ್ತಿದ್ದ ಮಹಿಳೆ

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮಹಿಳೆ ಹೇಳುವ ಪ್ರಕಾರ 15ಲಕ್ಷ ರೂ. ಮೌಲ್ಯದ ಒಟ್ಟು 15 ತೊಲೆ ಬಂಗಾರ ಕಳೆದುಹೋಗಿದೆ ಎನ್ನಲಾಗಿದೆ. ಮಹಿಳೆ ಹಾನಗಲ್ ಪಟ್ಟಣದಲ್ಲಿ ನಡೆಯಲಿದ್ದ ಸಹೋದರನ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದಾಗಿ ಹೇಳಿದ್ದಾರೆ. ಇನ್ನು ಒಬ್ಬಳೆ ಇದ್ದಿದ್ದರಿಂದ ನಿಲ್ದಾಣದ ಅಂಗಡಿಯೊಂದರಲ್ಲಿ ನನ್ನ ಬ್ಯಾಗ್ ಇಟ್ಟು ಹೋಗಿದ್ದೆ. ಯಾರೋ ಇದನ್ನೂ ಗಮನಿಸಿ ನಂತರ ಚಿನ್ನಾಭರಣವನ್ನು ಕದ್ದಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಚಿನ್ನಾಭರಣ ಕದ್ದ ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಸ್‌ ನಿಲ್ದಾಣದ ಸಿಸಿ ಟಿವಿ ಫೋಟೇಜ್‌ ಸಂಗ್ರಹಕ್ಕೆ ಮುಂದಾಗಿದ್ದಾರೆ. ಜತೆಗೆ ಬೆಲೆ ಬಾಳುವ ವಸ್ತುಗಳನ್ನು ಧರಿಸುವಾಗ ಅಥವಾ ಕೊಂಡುಹೋಗುವಾಗ ಎಚ್ಚರದಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version