ಬೆಂಗಳೂರು: ನೀವೇನಾದರೂ ಟೀ-ಕಾಫಿ ಪ್ರಿಯರಾಗಿದ್ದರೆ ಎಚ್ಚರವಾಗಿರಿ. ಯಾಕೆಂದರೆ ಖತರ್ನಾಕ್ ಜೋಡಿಯೊಂದು ಟೀ ಕುಡಿಸಿ ಬಳಿಕ ನಿಮ್ಮಲ್ಲಿರುವ ಚಿನ್ನಾಭರಣವನ್ನು ಎಗರಿಸಿ (theft Case) ಪರಾರಿ ಆಗುತ್ತಾರೆ. ಹೀಗೆ ವೃದ್ಧರನ್ನೇ ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದ ಲಿವಿಂಗ್ ಟುಗೆದರ್ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಹಾಗೂ ಮಂಜುಶ್ರೀ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರು ವೃದ್ದರನ್ನೇ ಟಾರ್ಗೆಟ್ ಮಾಡುತ್ತಿದ್ದರು. ನಯವಾಗಿ ಮಾತಾಡಿ ವೃದ್ಧೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಟೀ ಕುಡಿಯುವ ನೆಪದಲ್ಲಿ ಕರೆದು ಬಳಿಕ ಮಾತಿಗಿಳಿಯುತ್ತಿದ್ದರು. ಮಾತನಾಡುತ್ತಲೆ ಟೀ ಅಥವಾ ಕಾಫಿಗೆ ನಿದ್ರೆ ಮಾತ್ರೆಯನ್ನು ಹಾಕಿ ಪ್ರಜ್ಞೆ ತಪ್ಪಿಸುತ್ತಿದ್ದರು. ಟೀ ಕುಡಿದು ಪ್ರಜ್ಞೆ ತಪ್ಪುತ್ತಿದ್ದಂತೆ ಅವರ ಬಳಿ ಇದ್ದ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದರು.
ಇದೇ ಮಾದರಿಯಲ್ಲಿ ಮಲ್ಲೇಶ್ವರಂನ ಅಂಗಡಿ ಮಾಲೀಕರ ಚಿನ್ನ ಎಗರಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಯನ್ನು ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಕಾರ್ತಿಕ್ ಈ ಹಿಂದೆ ಕೊಲೆ ಹಾಗೂ ಕಿಡ್ನ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದು ಹೊಸ ಮಾದರಿ ಕೃತ್ಯಕ್ಕೆ ಕೈ ಹಾಕಿದ್ದ.
ಇದನ್ನೂ ಓದಿ: Love Case : ಪ್ರೀತ್ಸೆ ಎಂದು ಹಿಂದೆ ಬಿದ್ದ; ಒಲ್ಲೆ ಎಂದಿದ್ದಕ್ಕೆ ಮಾನಭಂಗ ಮಾಡಿ ಕೊಂದ!
ಲಿವಿಂಗ್ ಟುಗೆದರ್ ಜೋಡಿಯ ಕಳ್ಳತನ
ಲಿವಿಂಗ್ ಟುಗೆದರ್ನಲ್ಲಿದ್ದಾಗ ಜತೆಯಾಗಿ ತಂತ್ರವನ್ನು ರೂಪಿಸುತ್ತಿದ್ದರು. ಕಾರ್ತಿಕ್ ವೃದ್ಧರೊಂದಿಗೆ ಮಾತಾಡಿ ಪುಸಲಾಯಿಸಿ ಚಿನ್ನ ಕಳವು ಮಾಡಿ ಮಂಜುಶ್ರೀಗೆ ನೀಡುತ್ತಿದ್ದ. ಮಂಜುಶ್ರೀ ಕದ್ದ ಚಿನ್ನವನ್ನು ಮಾರಾಟ ಮಾಡುತ್ತಿದ್ದಳು.
ಸದ್ಯ ಮಲ್ಲೇಶ್ವರಂ ಪೊಲೀಸರು ಈ ಖತರ್ನಾಕ್ ಜೋಡಿಯನ್ನು ಬಂಧಿಸಿದ್ದು, ಸುಮಾರು 6.5 ಲಕ್ಷ ಮೌಲ್ಯದ 115 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಟೀ-ಕಾಫಿಗೆ ಬೆರೆಸುತ್ತಿದ್ದ ನಿದ್ದೆ ಮಾತ್ರೆಯನ್ನು ಕಸಿದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮಲ್ಲೇಶ್ವರಂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ