ಬೆಂಗಳೂರು: ಶೋಕಿ ಜೀವನಕ್ಕಾಗಿ ದರೋಡೆಗೆ ಇಳಿದಿದ್ದ ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆದು ಲಕ್ಷಾಂತರ ರೂಪಾಯಿಯನ್ನು ಎಗರಿಸಿ ಪರಾರಿ ಆಗುತ್ತಿದ್ದವರನ್ನು (Theft Case) ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ವಿದೇಶ್ ಪಿಚಲ್ ಹಾಗೂ ಜೀವನ್ ಅಲಿಯಾಸ್ ರಾಜು ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಳೆದ ಫೆಬ್ರವರಿ 9ರಂದು ಚಿಕ್ಕಬಿದರಕಲ್ಲು ನಿವಾಸಿ ಚಿನ್ನಸ್ವಾಮಿ ಹಾಗೂ ಅವರ ಪತ್ನಿಯೊಂದಿಗೆ ಮಾದನಾಯಕನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಿವೇಶನವನ್ನು ಅಗ್ರಿಮೆಂಟ್ ಮಾಡಿಸಿ 7 ಲಕ್ಷ ಹಣವನ್ನು ಪಡೆದುಕೊಂಡು ದೊಂಬರಹಳ್ಳಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಬೈಕ್ ನಿಲ್ಲಿಸಿ ತರಕಾರಿ ಅಂಗಡಿ ಬಳಿ ಹೋಗಿದ್ದಾಗ, ಬೈಕ್ ಪಕ್ಕದಲ್ಲಿ 100ರೂ ನೋಟ್ ಹಾಕಿ ಚಿನ್ನಸ್ವಾಮಿ ಅವರ ಗಮನವನ್ನು ಬೇರೆಡೆಗೆ ಸೆಳೆದು 7 ಲಕ್ಷ ರೂಪಾಯಿಯನ್ನು ಕದ್ದು ಪರಾರಿಯಾಗಿದ್ದರು.
ಇದೆ ವ್ಯಕ್ತಿಗಳು ಫೆಬ್ರವರಿ 23ರಂದು ಶರ್ಮಿಳಾ ಎಂಬಾಕೆಯ ಗಮನ ಬೇರೆಡೆ ಸೆಳೆದು 2.34 ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ್ದ 5 ಲಕ್ಷ ರೂಪಾಯಿ ನಗದು ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಲೋನ್ ಪಡೆದು ವಂಚನೆ
ಲೋನ್ ಪಡೆದು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪ್ರದೀಪ್ ಹಾಗೂ ಮನ್ಸೂರು ಎಂಬುವವರು ಲೋನ್ ಮೂಲಕ ಕಾರು ಖರೀದಿಸಿ ಬಳಿಕ ಸಾಲ ತೀರಿಸದೇ ಬೇರೆಯವರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು.
ಇದನ್ನೂ ಓದಿ: Road Accident: ಚಳ್ಳಕೆರೆಯಲ್ಲಿ ಲಾರಿ-ಬೈಕ್ ನಡುವೆ ಭೀಕರ ಅಪಘಾತ; ಚಕ್ರಕ್ಕೆ ಸಿಲುಕಿ ಯುವಕನ ದೇಹ ಛಿದ್ರ
ಆರೋಪಿಗಳು ಬೆಂಗಳೂರು ಟ್ರಾನ್ಸ್‌ಪೋರ್ಟ್ ಸಲ್ಯೂಷನ್ ಎಂಬ ನಕಲಿ ಕಂಪೆನಿ ತೆರೆದಿದ್ದರು. ನಕಲಿ ಸೀಲ್, ದಾಖಲೆ ಸೃಷ್ಟಿಸಿ ಲೋನ್ ಪಡೆದು ವಂಚಿಸುತ್ತಿದ್ದರು. ನಕಲಿ ನಂಬರ್ ಪ್ಲೇಟ್ ಬಳಸಿ ಹೊರರಾಜ್ಯಕ್ಕೆ ಕಾರು ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 80 ಲಕ್ಷ ಮೌಲ್ಯದ 7 ಕಾರುಗಳನ್ನು ವಶಪಡಿಸಲಾಗಿದೆ. ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ