Site icon Vistara News

Theft Case: ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸ್ತಾಳೆ; ಚಿನ್ನಾಭರಣ ಎಗರಿಸಿ ಪರಾರಿ ಆಗ್ತಾಳೆ ನರ್ಸ್‌ ಲಕ್ಷ್ಮೀ!

theft case in Bangalore

ಬೆಂಗಳೂರು: ಕಳೆದ ಮೇ 26ರಂದು ಲಗ್ಗೆರೆಯ ಪಾರ್ವತಿ ನಗರದಲ್ಲಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದ ಕಿರಾತಕಿಯೊಬ್ಬಳು ಮಾರಣಾಂತಿಕ ಹಲ್ಲೆ ನಡೆಸಿ, ಚಿನ್ನಾಭರಣ ಕಸಿದು (Theft case) ಪರಾರಿ ಆಗಿದ್ದಳು. ಶಾಂತಮ್ಮ ಎಂಬುವವರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಪ್ರಕರಣವನ್ನು ಭೇದಿಸಿದ ನಂದಿನಿ ಲೇಔಟ್‌ ಪೊಲೀಸರು ಇದೀಗ ಕಳ್ಳಿಯನ್ನು ಬಂಧಿಸಿದ್ದಾರೆ. ಲಕ್ಷ್ಮೀ ಬಂಧಿತ ಆರೋಪಿಯಾಗಿದ್ದು, ವೃದ್ಧೆ ಶಾಂತಮ್ಮ ಬಳಿಯಿದ್ದ ಕದ್ದ 80 ಸಾವಿರ ಮೌಲ್ಯದ 20 ಗ್ರಾಂ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ.

ಕದ್ದ ಮಾಲು ರಿಕವರಿ ಮಾಡುವುದೆ ದೊಡ್ಡ ತಲೆನೋವು

ಲಗ್ಗರೆಯ ಪಾರ್ವತಿನಗರದಲ್ಲಿ ವಾಸವಿದ್ದ ಶಾಂತಮ್ಮ, ಕೋವಿಡ್‌ ಸಮಯದಲ್ಲಿ ಪತಿಯನ್ನು ಕಳೆದುಕೊಂಡಿದರು. ಪತಿ ಅಗಲಿಕೆ ಬಳಿಕ ಒಂಟಿಯಾಗಿದ್ದ ಶಾಂತಮ್ಮ, ನಾಲ್ಕು ಮನೆ ಬಾಡಿಗೆಗೆ ಕೊಟ್ಟಿದ್ದರು. ಇನ್ನು ಎರಡು‌‌ ಮನೆ ಖಾಲಿಯಾಗಿದ್ದರಿಂದ ಮನೆ ಮುಂದು ಬಾಡಿಗೆಗೆ ಮನೆ ಇದೆ ಎಂದು ಬೋರ್ಡ್‌ ಹಾಕಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳಿ ಲಕ್ಷ್ಮಿ, ಖಾಲಿ ಇರುವ ಮನೆ ಕೇಳುವ ನೆಪದಲ್ಲಿ ಬಂದು ಹಲ್ಲೆ ಮಾಡಿ ಕೊರಳಿನಲ್ಲಿದ್ದ ಚಿನ್ನಾಭರಣ ಕಸಿದು ಪರಾರಿ ಆಗಿದ್ದಳು.

ಗಾಯಾಳು ಶಾಂತಮ್ಮ

ಪೊಲೀಸರು ಕಾರ್ಯಾಚರಣೆ ನಡೆಸಿ ಲಕ್ಷ್ಮಿಯನ್ನು ಬಂಧಿಸಿ ವಿಚಾರಣೆಯನ್ನು ನಡೆಸಿದರೆ, ತಾನು ಚಿನ್ನದ ಸರ ಕದ್ದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಳು. ಹೀಗೆ ಸುಮಾರು ಮೂರು ದಿನಗಳವರೆಗೂ ಆಕೆ ತನ್ನ ಕೃತ್ಯವನ್ನು ಒಪ್ಪಿಕೊಂಡಿರಲಿಲ್ಲ. ಇತ್ತ ಶಾಂತಮ್ಮನವರು ಲಕ್ಷ್ಮಿಯೇ ಸರ ಕದ್ದಿದ್ದು ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು. ಈ ಇಬ್ಬರ ಹೇಳಿಕೆಗಳು ಪೊಲೀಸರಿಗೆ ನಿಜಕ್ಕೂ ತಲೆ ನೋವಾಗಿತ್ತು. ಕೊನೆಗೂ ಹರಸಾಹಸ ಮಾಡಿ ಪೊಲೀಸರು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿ, ಸರವನ್ನು ರಿಕವರಿ ಮಾಡಲು ಯಶಸ್ವಿಯಾಗಿದ್ದಾರೆ.

ನರ್ಸ್‌ ಆಗಿದ್ದವಳು ಕಳ್ಳಿಯಾದ ಕಥೆ

ಬಂಧಿತ ಲಕ್ಷ್ಮಿಯ ಕಳ್ಳತನದ ಪುರಾಣ ಇದು ಮೊದಲಲ್ಲ. ಈ ಹಿಂದೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕಳ್ಳತನ ಎಸಗಿರುವುದು ತಿಳಿದು ಬಂದಿದೆ. ಈ ಹಿಂದೆ ನರ್ಸ್ ಆಗಿದ್ದ ಲಕ್ಷ್ಮಿ, ಸೆಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಇಂಜೆಕ್ಷನ್ ಕೊಡುವ ನೆಪದಲ್ಲಿ ಸಂಬಂಧಿಕರನ್ನು ಹೊರಗೆ ಕಳಿಸಿದ್ದಳು. ಅನಸ್ತೇಷಿಯಾ ಇಂಜೆಕ್ಷನ್ ನೀಡಿ ರೋಗಿಗಳ ಚಿನ್ನಾಭರಣ ದೋಚುತ್ತಿದ್ದಳು. ಈ ಬಗ್ಗೆ ದೂರು ಕೂಡ ದಾಖಲಾದ ಹಿನ್ನೆಲೆ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇಂತಹ‌ ನಟೋರಿಯಸ್ ಕಳ್ಳಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಇಂತಹ ಕೃತ್ಯವನ್ನು ಎಸಗುವವರು ಹೆಚ್ಚಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ನಂದಿನಿ ಲೇಔಟ್ ಪೊಲೀಸರು ಮನವಿ ಮಾಡಿದ್ದಾರೆ.

ಕತ್ತಲಾದರೆ ಕಾಂಪೌಂಡ್‌ ಹಾರುವ ಕಳ್ಳ

ಕತ್ತಲಾಗುತ್ತಿದ್ದಂತೆ ಕಂಡ ಕಂಡವರ ಮನೆಯ ಕಾಂಪೌಂಡ್‌ ಹಾರಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸಲಾಗಿದೆ. ಮಣಿಕಂಠ (30) ಬಂಧಿತ ಆರೋಪಿ ಆಗಿದ್ದಾನೆ. ಕಳೆದ ಹಲವು ದಿನಗಳಿಂದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದವನನ್ನು ಹೆಡೆಮುರಿ ಕಟ್ಟಿದ್ದಾರೆ. ಒಟ್ಟು 10,60,000 ಮೌಲ್ಯದ ಕಳ್ಳತನದ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಡಿಜೆ ಹಳ್ಳಿ ನಿವಾಸಿಯಾಗಿರುವ ಮಣಿಕಂಠ, ವಿಲಾಸಿ ಜೀವನಕ್ಕಾಗಿ ದ್ವಿಚಕ್ರ ವಾಹನ ಮತ್ತು ಮನೆಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಕಾರ್ಯಾಚರಣೆ

ಇದನ್ನೂ ಓದಿ: Viral News : ಕಾಲು ಮುರಿದುಕೊಂಡಿರುವ ಈ ಗೊಂಬೆಯ ಬೆಲೆ ಬರೋಬ್ಬರಿ 54 ಲಕ್ಷವಂತೆ! ಅಂಥದ್ದೇನಿದೆ ಇದರಲ್ಲಿ?

ಚೆನ್ನೈ ಗ್ಯಾಂಗ್‌ನಿಂದ ವಶಪಡಿಸಿಕೊಂಡ ಮಾಲು

ಚೆನ್ನೈ ಗ್ಯಾಂಗ್‌ ಅರೆಸ್ಟ್‌

ರಾಜರಾಜೇಶ್ವರಿನಗರ ಪೊಲೀಸರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ. ಗಮನ ಬೇರೆಡೆ ಸೆಳೆದು ಕಾರುಗಳಲ್ಲಿ ಇದ್ದ ವಸ್ತುಗಳ ಕಳ್ಳತನ ಮಾಡುತ್ತಿದ್ದ ಚೆನ್ನೈ ಗ್ಯಾಂಗ್ ಇದಾಗಿದೆ. ಮೂರು ರಾಜ್ಯಗಳಲ್ಲಿ ಹಣ ಕಳವು ಮಾಡುತ್ತಿದ್ದ ಈ ಗ್ಯಾಂಗ್‌ನ ಸದಸ್ಯರನ್ನು ಅರೆಸ್ಟ್‌ ಮಾಡಲಾಗಿದೆ. ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ, ಕಾರ್‌ನಲ್ಲಿ ತೆಗೆದುಕೊಂಡು ಹೋಗುವವರನ್ನು ಟಾರ್ಗೆಟ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕಾರ್ತಿಕ್ (37) , ಅನುಮೋದಾಸ್ (44) ಎಂಬುವವರ ಬಂಧನವಾಗಿದೆ. ಒಂದು ಪ್ರಕರಣದಲ್ಲಿ ಇನೋವಾ ಕಾರಿನಲ್ಲಿದ್ದ 15 ಲಕ್ಷ ರೂ. ಎಗರಿಸಿದ್ದ ಆರೋಪಿಗಳಿಂದ 13.97 ಲಕ್ಷ ಹಣ, ಕಾರು, ಎರಡು ಬೈಕ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version