ಬೆಂಗಳೂರು: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಕಳ್ಳಕಾಕರಿಗೆ ಸಿಂಹಸ್ವಪ್ನವಾಗಿರಬೇಕಾದ ಕೆಲ ಪೊಲೀಸರು ಕಳ್ಳರೊಂದಿಗೆ ಸೇರಿ ಕಳ್ಳತನಕ್ಕೆ (Theft Case) ಇಳಿದಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್‌ವೊಬ್ಬ ಮನೆಗಳ್ಳತನಕ್ಕೆ ಇಳಿದು ಸಿಕ್ಕಿ ಹಾಕಿಕೊಂಡಿದ್ದಾನೆ. ಯಲ್ಲಪ್ಪ ಬಂಧಿತ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾನೆ.
ಜ್ಞಾನಭಾರತಿ ಪೊಲೀಸರು ಕಾನ್ಸ್‌ಟೇಬಲ್ ಯಲ್ಲಪ್ಪನನ್ನು ಬಂಧಿಸಿದ್ದು, ಒಟ್ಟು ಮೂರು ಮನಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಚಂದ್ರಾಲೇಔಟ್, ಚಿಕ್ಕಜಾಲದಲ್ಲೂ ಯಲ್ಲಪ್ಪ ಕೈ ಚಳಕ ತೋರಿಸಿದ್ದಾನೆ. ಈ ಹಿಂದೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ.
ಇದನ್ನೂ ಓದಿ: Karnataka Weather : ಚಂಡಮಾರುತ ಎಫೆಕ್ಟ್; ರಾಜ್ಯದಲ್ಲಿ ಇನ್ನೂ ಮೂರು ದಿನ ವ್ಯಾಪಕ ಮಳೆ
ಈ ಹಿಂದೆ ಬನಶಂಕರಿ ಠಾಣೆಯ ಕ್ರೈಂ ವಿಭಾಗದ ಕಾನ್ಸ್‌ಟೇಬಲ್ ಆಗಿದ್ದ ಯಲ್ಲಪ್ಪ ಕಳ್ಳತನ ಮಾಡಿಸಿ ಅಮಾನತಾಗಿದ್ದ. ಆರೋಪಿಗಳ ವಿಚಾರಣೆ ವೇಳೆ ಯಲ್ಲಪನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಯಲ್ಲಪ್ಪನ ಅಮಾನತು ಮಾಡಿ ತನಿಖೆಗೆ ಆದೇಶ ಮಾಡಲಾಗಿತ್ತು. ಇಷ್ಟಾದರೂ ತನ್ನ ಹಳೆ ಚಾಳಿಯನ್ನೇ ಮುಂದುವರೆಸಿದ ಯಲ್ಲಪ್ಪ ಮತ್ತೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆತ್ಮಹತ್ಯೆ ಬೆದರಿಕೆ!
ಯಲ್ಲಪ್ಪನನ್ನು ಬಂಧಿಸಿ, ಕದ್ದ ವಸ್ತುಗಳನ್ನು ರಿಕವರಿಗೆ ಕರೆದುಕೊಂಡು ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಊರಿಗೆ ಮಾತ್ರ ಕರೆದು ಕೊಂಡು ಹೋಗಬೇಡಿ ಎಂದು ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ.
ಹಣ ಕೊಡದಿದ್ದರೆ ಡಕಾಯಿತಿ ಕೇಸ್ ಫಿಟ್
ಹಣ ಕೊಡದಿದ್ದರೆ ಡಕಾಯಿತಿ ಪ್ರಕರಣ ದಾಖಲು ಮಾಡುವುದಾಗಿ ಬೆಳ್ಳಂದೂರು ಪೊಲೀಸರು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಸವಾರ ಕಿರಣ್ ಎಂಬುವವರು ಆರೋಪಿಸಿದ್ದಾರೆ. ಎರಡು ದಿನದ ಹಿಂದೆ ಕಾರು ಚಾಲಕನೊಬ್ಬ ಕಿರಣ್ ಬೈಕ್‌ಗೆ ಗುದ್ದಿ ಹಾಗೇ ಹೋಗಿದ್ದ. ಈ ವೇಳೆ ಕಿರಣ್ ಹಾಗು ಸ್ನೇಹಿತರು ಚೇಸ್ ಮಾಡಿ ಹಿಡಿದು ನಷ್ಟ ಭರಿಸುವಂತೆ ಹೇಳಿದ್ದಾರೆ. ಆಗ ಕೊಡದೆ ಇದ್ದಾಗ ಅವರ ಮೊಬೈಲ್ ಪಡೆದು ಬಂದಿದ್ದಾರೆ.
ನಂತರ ಕಾರು ಚಾಲಕ ಬೆಳ್ಳಂದೂರು ಪೊಲೀಸ್ ಠಾಣೆಗೆ ಬಂದು ಕೇಸ್ ದಾಖಲಿಸದೆ, ಮೊಬೈಲ್ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಬೆಳ್ಳಂದೂರು ಪೊಲೀಸ್ ಕಾನ್ಸ್‌ಟೇಬಲ್ ಮಾರುತಿ 30 ಸಾವಿರ ಹಣ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಿರಣ್ ತಂದೆ ನಿರಾಕರಿಸಿದ್ದಾರೆ. ಕೊನೆದಾಗಿ 15 ಸಾವಿರ ಕೊಡಿ ಕೇಸ್ ಮಾಡಲ್ಲ ಎಂದಿದ್ದಾರೆ. ಹಣ ಕೊಡಲು ಆಗುವುದಿಲ್ಲ ಎಂದಿದಕ್ಕೆ ಡಕಾಯಿತಿ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ