ಉಳ್ಳಾಲ: ಗೃಹಪ್ರವೇಶದ ಮನೆಯಲ್ಲಿ ಪೂಜೆಯ ಸಂದರ್ಭದಲ್ಲೇ ಎಲ್ಲರ ಮುಂದೆ ಕಳವು ನಡೆಸಿದ (Theft Case) ಕಳ್ಳನೊಬ್ಬ ಅದೇ ರಾತ್ರಿ ನೆರೆಮನೆಯಿಂದಲೂ ಲಕ್ಷಾಂತರ ಮೌಲ್ಯದ ನಗದು ದೋಚಿದ ಪ್ರಕರಣ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿ ನಡೆದಿದೆ. ಆದರೆ, ಮನೆಯ ಗೃಹಪ್ರವೇಶದ ವಿಡಿಯೊದಲ್ಲಿ ಕಳ್ಳನ ಕುತಂತ್ರ ಗೊತ್ತಾಗಿದೆ.
ಡಿ.10ರಂದು ರಾತ್ರಿ ಸ್ಮಿತಾ-ದಾಮೋದರ್ ದಂಪತಿ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಡ್ಕ ಬೈಲು ಎಂಬಲ್ಲಿ ನಿರ್ಮಿಸಿದ ನೂತನ ಮನೆಯಲ್ಲಿ ವಾಸ್ತು ಹೋಮ ಕಾರ್ಯಕ್ರಮ ನಡೆಸಿದ್ದರು. ಮನೆಯಲ್ಲಿ ವಾಸ್ತು ಹೋಮ ನಡೆಯುತ್ತಿರುವಾಗ ಹೋಮದ ಹೊಗೆ ಹೆಚ್ಚಾಗಿದೆ. ಈ ವೇಳೆ ಇದರ ಲಾಭ ಪಡೆದು ಒಳನುಗ್ಗಿದ್ದ ಬರ್ಮುಡಧಾರಿ ಯುವಕನೊಬ್ಬ ಕೋಣೆಯೊಳಗೆ ನುಗ್ಗಿ ಬ್ಯಾಗಿನಲ್ಲಿದ್ದ 15,000 ರೂ. ನಗದು, ಮೊಬೈಲ್ ಚಾರ್ಜರ್ ಮತ್ತು ಬೆಲೆ ಬಾಳುವ ಕಾಸ್ಮೆಟಿಕ್ಸ್ ಅನ್ನು ಕಳವು ಮಾಡಿದ್ದಾನೆ.
ಸ್ವಲ್ಪ ಸಮಯದ ಬಳಿಕ ಬ್ಯಾಗ್ ಅನ್ನು ಪರಿಶೀಲಿಸಿದಾಗ ಕಳುವಾಗಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿರುವವರೆಲ್ಲೂ ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲ ಕಡೆ ಹುಡುಕಾಡಲಾಗಿದೆ. ಆದರೆ, ಯಾರ ಮೇಲೆ ಅನುಮಾನ ಪಡುವುದು ಎಂಬುದು ತಿಳಿಯದಾಗಿದೆ. ಆಗ ಗೃಹಪ್ರವೇಶದ ವಿಡಿಯೊ ರೆಕಾರ್ಡಿಂಗ್‌ಗಾಗಿ ವಿಡಿಯೊಗ್ರಾಫರ್ ಅವರನ್ನು ಕರೆಸಿರುವುದು ನೆನಪಾಗಿದ್ದು, ಅದರಲ್ಲಿ ವಿಡಿಯೊವನ್ನು ಪರಿಶೀಲನೆ ಮಾಡಲಾಗಿದೆ. ಆಗ ಕಳ್ಳನು ಹೋಮ ನಡೆಯುತ್ತಿದ್ದ ವೇಳೆ ಮನೆಯೊಳಗಿನ ಕೋಣೆಗೆ ನುಗ್ಗಿ ಹೊರನಡೆಯುವುದು ಗೊತ್ತಾಗಿದೆ.
ಅದೇ ದಿನ ಮಧ್ಯ ರಾತ್ರಿ ಸಮೀಪದ ಶಿವ ಸುಬ್ರಹ್ಮಣ್ಯ ಪ್ರಸಾದ್ ಭಟ್ ಎಂಬುವವರ ಮನೆಗೂ ನುಗ್ಗಿರುವ ಈತ ಬಾಗಿಲನ್ನು ಒಡೆದು ಕೋಣೆಯೊಳಗಿನ ಕಪಾಟಿನಲ್ಲಿದ್ದ 11,000 ರೂ. ನಗದು, 32 ಗ್ರಾಂ ಚಿನ್ನ , 8 ಬೆಳ್ಳಿಯ ನಾಣ್ಯ ಮತ್ತು 3 ರೇಡೋ ವಾಚ್‌ಗಳು ಸೇರಿ ಒಟ್ಟು 1,49,000 ರೂಪಾಯಿ ಮೌಲ್ಯದ ನಗ, ನಗದನ್ನು ಕದ್ದೊಯ್ದಿದ್ದಾನೆ.
ಈ ಸಂಬಂಧ ಹಲವು ಕಡೆ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದಾಗ ಬರ್ಮುಡಧಾರಿ ಜತೆಗೆ ಇನ್ನೊಬ್ಬ ಇರುವುದು ಗೊತ್ತಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ಕಾರ್ಯ ಆರಂಭವಾಗಿದೆ.
ಇದನ್ನೂ ಓದಿ | Karnataka Election | ನನ್ನ ಜತೆ ಯಾರು ಇರುತ್ತಾರೆ, ಯಾರು ಬರುತ್ತಾರೆಂದು ಡಿ. 25ಕ್ಕೆ ಹೇಳುತ್ತೇನೆ: ಜನಾರ್ದನ ರೆಡ್ಡಿ