Site icon Vistara News

Theft Case: ಕದ್ದ ಚಿನ್ನವನ್ನೇ ಧರಿಸಿ ರೀಲ್ಸ್​ ಮಾಡುತ್ತಿದ್ದ ಸೋಷಿಯಲ್‌ ಮೀಡಿಯಾ​ ಸ್ಟಾರ್ ಬಂಧನ

#image_title

ಬೆಂಗಳೂರು: ಮುಂಬೈ ಮೂಲದ ಸೋಷಿಯಲ್ ಮೀಡಿಯಾ ಸ್ಟಾರ್‌ವೊಬ್ಬ ಕಳ್ಳತನ ಮಾಡಿ (Theft Case) ಪರಾರಿ ಆಗಿದ್ದವನು ಕೊನೆಗೂ ಅಮೃತಹಳ್ಳಿ ಪೊಲೀಸರಿಗೆ (Amruthahalli Police) ಸಿಕ್ಕಿಬಿದ್ದಿದ್ದಾನೆ.

ತನ್ನನ್ನು ತಾನು ಹೀರೋ ಎಂಬಂತೆ ಬಿಂಬಿಸಿಕೊಂಡಿದ್ದ ಸಲೀಂ ಅಲಿಯಾಸ್‌ ಬಾಂಬೆ ಸಲೀಂ ಹಾಗೂ ಯಾಸ್ಮೀನ್‌ ಮಖ್ಬುಲ್‌ ಖಾನ್‌ ಅಲಿಯಾಸ್‌ ಅಸ್ಲಾಂ ಉರ್ಪ್‌ ಪಾಂಡೆ ಬಂಧಿತ ಆರೋಪಿಗಳಾಗಿದ್ದಾರೆ.

ರಾತ್ರಿ ವೇಳೆ ಕಳ್ಳತನಕ್ಕೆ ಇಳಿಯುತ್ತಿದ್ದ ಈತ ಮನೆಗೆ ಕನ್ನ ಹಾಕಲು ಪ್ಲ್ಯಾನ್‌ ಮಾಡುತ್ತಿದ್ದ. ಮನೆ ಮುಂದೆ ಕಸ ಕಡ್ಡಿಗಳು ಬಿದ್ದಿರುವುದು, ಮೆಟ್ಟಿಲಿನ ಮೇಲೆ ಧೂಳುಗಳು ಇರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಅಷ್ಟೇ ಅಲ್ಲದೆ ಹಗಲಿನಲ್ಲೂ ಮನೆಯಾಚೆ ಲೈಟ್​ ಉರಿಯುತ್ತಿದ್ದರೆ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದ. ಬಳಿಕ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ. ಕದ್ದ ಚಿನ್ನಾಭರಣವನ್ನು ಧರಿಸಿಯೇ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್​ ಮಾಡಿ ಸಾವಿರಾರು ಲೈಕ್ಸ್‌ ಪಡೆಯುತ್ತಿದ್ದ. ಸದ್ಯ ರೀಲ್ಸ್‌ ಸ್ಟಾರ್‌ನಲ್ಲಿ ಮಿಂಚುತ್ತಿದ್ದವನ ರಿಯಲ್‌ ಅವತಾರವನ್ನು ಪೊಲೀಸರು ಅನಾವರಣ ಮಾಡಿದ್ದಾರೆ.

ಅಂತಾರಾಜ್ಯ ಕಳ್ಳನಾಗಿರುವ ಬಾಂಬೆ ಸಲೀಂ ಹತ್ತಾರು ಪೊಲೀಸ್‌ ಠಾಣೆಗೆ ಬೇಕಾಗಿರುವ ಆರೋಪಿ ಆಗಿದ್ದಾನೆ. ಕಳೆದ ಜನವರಿ 23ರಂದು ಅಮೃತಹಳ್ಳಿ ನಿವಾಸಿಯೊಬ್ಬರು ಕುಟುಂಬದವರೆಲ್ಲರೂ ಸೇರಿಕೊಂಡು ತಿರುಪತಿ ದೇವಸ್ಥಾನಕ್ಕೆ ಹೋಗಿದ್ದರು. ಮರುದಿನ ವಾಪಸ್‌ ಆದವರಿಗೆ ಶಾಕ್‌ ಆಗಿತ್ತು. ಯಾಕೆಂದರೆ ಈ ಖರ್ತನಾಕ್‌ ಕಳ್ಳರಿಬ್ಬರು ಬೆಡ್ ರೂಮ್‌ನ ಕಿಟಕಿಯ ಸರಳುಗಳನ್ನು ಕಟ್ ಮಾಡಿ ಒಳ ಬಂದು, ಮನೆಯಲ್ಲಿದ್ದ ಸುಮಾರು 85 ಗ್ರಾಂ ತೂಕದ ಚಿನ್ನಾಭರಣಗಳು, ಸುಮಾರು 1.5 ಕೆ.ಜಿ ಬೆಳ್ಳಿ, ಮೊಬೈಲ್, ವಾಚ್‌ಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿದ್ದರು.

ಈ ಸಂಬಂಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿ ತನಿಖೆಯನ್ನು ಮುಂದುವರಿಸಿದ ಪೊಲೀಸರ ತಂಡವು ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ತಾಂತ್ರಿಕ ಸಹಾಯದ ಮೊರೆ ಹೋಗಿದ್ದರು. ಇವರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಗಳು ಮುಂಬೈ, ಹೈದ್ರಾಬಾದ್, ದೆಹಲಿ, ಗುಜರಾತ್ ಭಾಗಗಳಲ್ಲಿ ಇರುವುದಾಗಿ ಮಾಹಿತಿ ತಿಳಿದು ಬಂದಿತ್ತು. ಸ್ಥಳಗಳಿಗೆ ಹೋಗಿ ಕಾರ್ಯಾಚರಣೆ ನಡೆಸಿ ಮಾರ್ಚ್‌ 24ರಂದು ಸಲಿಂ (46) ಮತ್ತು ಅಸ್ಲಾಂ ಉರ್ಪ್‌ ಪಾಂಡೆಯನ್ನು (42) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು

ಈ ಕಳ್ಳರಿಬ್ಬರೂ ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಸಲೀಂ ಅಲಿಯಾಸ್‌ ಬಾಂಬೆ ಸಲೀಂ ಮೇಲೆ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 7 ಪ್ರಕರಣ, ತುಮಕೂರು ನಗರದಲ್ಲಿ 2 ಪ್ರಕರಣ ಹಾಗೂ ಬೆಳಗಾವಿ ನಗರದಲ್ಲಿ 1 ಪ್ರಕರಣ ದಾಖಲಾಗಿದೆ. ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಇನ್ನು ಬೆಂಗಳೂರಲ್ಲಿ ಕಳ್ಳತನ ಮಾಡಿದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಮಹಾರಾಷ್ಟ್ರದ ಮುಂಬೈಯಲ್ಲಿ ಮಾರಾಟ ಮಾಡಿದ್ದರು. ಈಗ ಅಮೃತಹಳ್ಳಿ ಪೊಲೀಸರು ಸುಮಾರು 67 ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ ಎಲ್ಲ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನ, ಕಬ್ಬಿಣದ ರಾಡು, ಸ್ಕ್ರೂ ಡ್ರೈವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳ ಬಂಧನದಿಂದ 10 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ಅಪರಾಧಿ ಹಿನ್ನೆಲೆ ಹೊಂದಿರುವ ಈತನ ವಿರುದ್ಧ ಬೆಂಗಳೂರು ನಗರದ ಬಸವನಗುಡಿ, ರಾಜರಾಜೇಶ್ವರಿ ನಗರ, ಪುಲಕೇಶಿನಗರ, ಮೈಕೋ ಲೇಔಟ್, ಗಿರಿನಗರ ಹಾಗೂ ಚನ್ನಮ್ಮನ ಅಚ್ಚುಕಟ್ಟು, ಮಹಾಲಕ್ಷ್ಮಿ ಲೇಔಟ್, ತಿಲಕ್ ನಗರ ಹಾಗೂ ಇತರೆ ಠಾಣೆಗಳಲ್ಲಿ ಸುಮಾರು 35 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಈತ ನ್ಯಾಯಾಲಯಕ್ಕೆ ಹಾಜರಾಗದೇ ತೆಲೆಮರೆಸಿಕೊಂಡಿದ್ದು, ನ್ಯಾಯಾಲಯವು ಈತನ ವಿರುದ್ಧ ವಾರೆಂಟ್ ಹೊರಡಿಸಿದೆ.

ಈ ವಿಶೇಷ ಕಾರ್ಯಾಚರಣೆಯಲ್ಲಿ ಅಮೃತಹಳ್ಳಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಜಿ ನೇತೃತ್ವದಲ್ಲಿ, ಸಬ್ ಇನ್ಸ್‌ಪೆಕ್ಟರ್‌ಗಳಾದ ಸುನಿಲ್ ಕುಮಾರ್ ಕೆ.ಬಿ, ಕಿಶೋರ್ ಡಿ, ಮಧುಸೂದನ್, ಭೀಮಾಶಂಕರ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ನಂದೀಶ್, ವಿಠಲ್, ಕೆಂಪರಾಜು, ಗಜೇಂದ್ರ, ಸಂತೋಷ, ಹನುಮಂತಪ್ಪ, ಹಾಗೂ ಪ್ರಸಾದ್, ರಾಘವೇಂದ್ರ, ಚಂದ್ರಪ್ಪ, ಶಾಹೀನಾಬಾನು, ರವಿ, ಈಶಾನ್ಯ ವಿಭಾಗದ ಸಿ.ಡಿ.ಆರ್ ವಿಭಾಗದ ಎ.ಎಸ್.ಐ ಬಾಬು ವಿಶೇಷ ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Karnataka Election 2023: ಯತೀಂದ್ರ ಸಿದ್ದರಾಮಯ್ಯಗೆ ಅಪ್ಪನ ಸೋಲಿನ ಭಯ?; ಮತಯಾಚನೆ ವೇಳೆ ಅವರು ಹೇಳಿದ್ದೇನು?

ಸಿಂದಗಿ ಬೈಪಾಸ್‌ನಲ್ಲಿ ಸಿಕ್ಕಿ ಬಿದ್ದ ಕಳ್ಳರು

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಚಿಕ್ಕ ಸಿಂದಗಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ಜೇರಟಗಿ, ಸಿದ್ರಾಮ ಪಾಟೀಲ ಬಂಧಿತ ಆರೋಪಿಗಳಾಗಿದ್ದಾರೆ. ಸಿಂದಗಿಯ ಸುತ್ತಮುತ್ತ ಮನೆಗಳ್ಳತನ ಮಾಡುತ್ತಿದ್ದ ವರದಿ ಆಗಿತ್ತು. ಕಳ್ಳರಿಗಾಗಿ ಬಲೆ ಬೀಸಿದ್ದ ಪೊಲೀಸರು, ಸಿಂದಗಿ ಬೈಪಾಸ್‌ ಬಳಿ ಇವರಿಬ್ಬರನ್ನು ಬಂಧಿಸಿ, 5.51 ಲಕ್ಷ ರೂಪಾಯಿ ಮೌಲ್ಯದ 141.379 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version