Site icon Vistara News

Theft Case: ಪ್ರಯಾಣಿಕರ ಹಣ ಕದ್ದ ಕಳ್ಳನ ಬೆನ್ನಟ್ಟಿದ ಕೆಎಸ್‌ಆರ್‌ಟಿಸಿ ಡ್ರೈವರ್‌-ಕಂಡಕ್ಟರ್‌

KSRTC conductor chases thief

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ (Ksrtc Driver) ಎಂದಕೂಡಲೇ ಪ್ರಯಾಣಿಕರಿಗೆ ಅದೊಂದು ರೀತಿ ಅತೀವ ನಂಬಿಕೆ. ದೂರಾದೂರಿಗೆ ಪ್ರಯಾಣಿಸುವ ಪ್ರಯಾಣಿಕರು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಾಗಿ ಕೆಎಸ್‌ಆರ್‌ಟಿಸಿ ಬಸ್‌ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮೊಡನೆ ನಗದು, ಬೆಲೆಬಾಳುವ ವಸ್ತುಗಳನ್ನು ಬಸ್‌ನಲ್ಲಿಯೇ ತೆಗೆದುಕೊಂಡು ಹೋಗುತ್ತಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಜೂ.14 ರಂದು ಬೆಂಗಳೂರು- ತಿರುನಲ್ಲಾರ್ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ ಹಿಡಿದ ದಂಪತಿ ತಮ್ಮೊಂದಿಗೆ 5ಲಕ್ಷ ರೂ. ನಗದು ಇಟ್ಟುಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಪ್ರಯಾಣಿಕರ ಸೋಗಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಇದನ್ನೂ ಗಮನಸಿದ್ದ. ಆ ಕಡೆ ದಂಪತಿ ಊಟಕ್ಕಾಗಿ ಕೆಳಗಿಳಿದಿದ್ದಾಗ ಈತ ತನ್ನ ಕೈಚಳಕ ತೋರಲು ಮುಂದಾಗಿದ್ದ. ಬಸ್‌ನಲ್ಲಿಟ್ಟಿದ್ದ 5 ಲಕ್ಷ ರೂ. ನಗದು ಕದ್ದು ಪರಾರಿ ಆಗುತ್ತಿದ್ದ.

ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ಬಸ್‌ ಇಳಿದು ಓಡಿಹೋಗುತ್ತಿದ್ದಾಗ, ಇದನ್ನು ಗಮನಿಸಿದ ಚಾಲಕ ಮಂಜುನಾಥ್ ಹಾಗೂ ಚಾಲಕ ಕಂ ನಿರ್ವಾಹಕ ಸೋಮಪ್ಪ ಟಿ. ಎನ್ ಅನುಮಾನಗೊಂಡಿದ್ದಾರೆ. ತಡ ಮಾಡದೆ ಆ ಕಳ್ಳನ ಬೆನ್ನಟ್ಟಿ ಹಿಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಕೂಡಲೇ ಕಳ್ಳನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಚಾಲಕ, ನಿರ್ವಾಹಕರ ಸಮಯಪ್ರಜ್ಞೆ ಹಾಗೂ ಶೌರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹಣ ಕಳೆದುಕೊಂಡು ಕಂಗಾಲಾಗಿದ್ದ ತಿರುಮುರುಗನ್ ಅವರಿಗೆ ನಗದು ವಾಪಸ್‌ ಮಾಡಲಾಗಿದೆ. ಸಿಬ್ಬಂದಿ ಕುರಿತು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ: Theft Case: ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸ್ತಾಳೆ; ಚಿನ್ನಾಭರಣ ಎಗರಿಸಿ ಪರಾರಿ ಆಗ್ತಾಳೆ ನರ್ಸ್‌ ಲಕ್ಷ್ಮೀ!

ಸಂತಸ ವ್ಯಕ್ತಪಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಸಿಬ್ಬಂದಿ ಸಮಯ ಪ್ರಜ್ಞೆ, ಧೈರ್ಯ, ಸಾಹಸ ಮತ್ತು ಪ್ರಯಾಣಿಕರ ಬಗೆಗಿನ ಕಾಳಜಿಯು ಪ್ರಶ್ನಾತೀತ. ಇಂತಹ ಸಿಬ್ಬಂದಿಗಳೇ ನಮ್ಮ ಸಂಸ್ಥೆಯ ಹೆಮ್ಮೆ ಮತ್ತು ಗೌರವ. ಇವರ ಈ ಕಾರ್ಯವು ಇತರರಿಗೆ ಮಾದರಿಯಾಗಲಿ ಎಂದು ಆಶಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version