Site icon Vistara News

Theft Case : ದೂರು ನೀಡುತ್ತಿದ್ದಂತೆ ಪ್ರತ್ಯಕ್ಷವಾಯ್ತು ಚೆಂಬು! ಇದು ಪಕ್ಕದ ಮನೆಯ ಚೆಂಬೇಶ್ವರನ ಕಿತಾಪತಿ

Strange complaint received by Bengaluru police

ಬೆಂಗಳೂರು: ಯಾವುದೇ ಸಂದರ್ಭ ಇರಲಿ ದೂರು ಬಂದರೆ ನಾವು ‘ರಕ್ಷಕರು’ ಎಂಬುದನ್ನು ಬೆಂಗಳೂರು ನಗರ ಪೊಲೀಸರು (Bengaluru city Police) ಸಾಕ್ಷೀಕರಿಸಿದ್ದಾರೆ. ಬೆಂಗಳೂರು ನಗರ ಪೊಲೀಸರಿಗೆ ಒಂದಲ್ಲ ಒಂದು ವಿಚಿತ್ರ ದೂರುಗಳು ಬರುತ್ತಲೇ ಇರುತ್ತವೆ. ಹಿಂದೊಮ್ಮೆ ನಿವಾಸಿಯೊಬ್ಬರು ಎದುರು ಮನೆಯ ಹುಂಜದ ಕೂಗಿನಿಂದ ನಿದ್ದೆಯಿಲ್ಲ. ಹೀಗಾಗಿ ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ಟ್ವೀಟ್‌ ಮಾಡಿದ್ದರು. ಇದೀಗ ಪೊಲೀಸ್ ಕಂಟ್ರೋಲ್ ರೂಂಗೆ ವಿಚಿತ್ರ ದೂರುವೊಂದು (Theft Case) ಬಂದಿದೆ.

ಸಣ್ಣಪುಟ್ಟ ವಸ್ತುಗಳಿಂದ ಹಿಡಿದು ಬೆಲೆಬಾಳುವ ವಸ್ತುಗಳು ಕಳವು ಆಗಿರುವ ಬಗ್ಗೆ ಪೊಲೀಸರಿಗೆ ದೂರು ಬರುತ್ತೆ. ಈಗ ಬಂದ ದೂರು ಸಣ್ಣದಾದರೂ, ಕಂಟ್ರೋಲ್ ರೂಂನ ಕಂಪ್ಲೈಂಟ್ ಲಿಸ್ಟ್‌ನಲ್ಲಿ ಅದುವೇ ಟಾಪ್‌ನಲ್ಲಿತ್ತು. ಅಂದಹಾಗೇ ಪೊಲೀಸ್‌ ಕಂಟ್ರೋಲ್‌ ರೂಂಗೆ ಫೋನ್‌ ಕರೆಯೊಂದು ಬಂದಿತ್ತು. ಆ ಕಡೆಯಿಂದ ವ್ಯಕ್ತಿಯೊಬ್ಬ ಅಯ್ಯೋ.. ಸರ್‌ ನಮ್ಮ ಮನೆಯಲ್ಲಿ ಕಳ್ಳತನವಾಗಿದೆ ಬೇಗ ಬನ್ನಿ ಎಂದಿದ್ದ. ಕೂಡಲೇ ಪೂರ್ವಪರ ವಿಚಾರಿಸಿದ ಕಂಟ್ರೋಲ್‌ ರೂಂ ಸಿಬ್ಬಂದಿ ಮನೆ ವಿಳಾಸವನ್ನೆಲ್ಲ ಪಡೆದಿದ್ದರು.

ಕೂಡಲೇ ಹೊಯ್ಸಳ ಪೊಲೀಸರಿಗೆ ಎಲ್ಲ ಮಾಹಿತಿಯನ್ನು ಕಂಟ್ರೋಲ್‌ ರೂಂ ಸಿಬ್ಬಂದಿ ರವಾನಿಸಿದ್ದರು. ಕಳ್ಳತನ ಕೇಸ್ ಎಂದು ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದರು. ಯಾಕೆಂದರೆ ಟಾಯ್ಲೆಟ್‌ನಲ್ಲಿ ಬಳಸುವ ಕಂಚಿನ ಚೆಂಬು ಕಳ್ಳತನ ಆಗಿದೆ ಸರ್‌ ಎಂದಿದ್ದ.

ಇದನ್ನೂ ಓದಿ: Viral Video: ಈ ಕಾರಣಕ್ಕೆ ಬರ್ತ್‌ ಡೇ ದಿನ ಭಾವುಕನಾಗಿ ಅತ್ತ 8ರ ಬಾಲಕ

ಇದನ್ನೂ ಕೇಳಿ ನಗಬೇಕೋ ಅಳಬೇಕೋ ಎಂಬುದು ತಿಳಿಯದೇ ಹೊಯ್ಸಳ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದರು. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಕ್ಕದ ಮನೆಯವನು ಟಾಯ್ಲೆಟ್‌ನಲ್ಲಿಟ್ಟಿದ್ದ ಕಂಚಿನ ಚೆಂಬು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಇತ್ತ ಪೊಲೀಸರಿಗೆ ದೂರು ಕೊಟ್ಟಿದ್ದೀನಿ ಎನ್ನುತ್ತಿದ್ದಂತೆ ಕದ್ದ ಚೆಂಬನ್ನು ಪಕ್ಕದ ಮನೆಯವ ವಾಪಸ್ಸು ಟಾಯ್ಲೆಟ್‌ನಲ್ಲಿ ಇಟ್ಟಿದ್ದಾನೆ.

ಈ ಬಗ್ಗೆ ಮಾಹಿತಿ ಕೇಳಿದ ಕಂಟ್ರೋಲ್‌ ರೂಂ ಸಿಬ್ಬಂದಿಗೆ ಹೊಯ್ಸಳ ಸಿಬ್ಬಂದಿ ನಗುತ್ತಲೇ ಚೆಂಬಿನ ಕಥೆಯನ್ನು ವಿವರಿಸಿದ್ದಾರೆ. ಟ್ಲಾಯೆಟ್‌ನಲ್ಲಿದ್ದ ಚೆಂಬನ್ನು ಕದ್ದು ಬಳಿಕ ಪೊಲೀಸರು ಬರುತ್ತಿದ್ದಂತೆ ವಾಪಸ್‌ ಇಟ್ಟಿದ್ದು ಸುಮ್ಮನೆ ತೊಳೆಯಲು ತೆಗೆದುಕೊಂಡಿದ್ದಾಗಿ ನೆರೆ ಮನೆ ನಿವಾಸಿ ತಿಳಿಸಿದ್ದಾರೆ. ಈ ಆಡಿಯೊ ಸದ್ಯ ವೈರಲ್‌ ಆಗಿದ್ದು, ಚೆಂಬೇಶ್ವರನ ಕಿತಾಪತಿ ಇದು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version