ಚಿತ್ರದುರ್ಗ: ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೊಬೈಲ್ ಕಳವು (Mobile theft) ಮಾಡುವಾಗಲೇ ಖದೀಮನೊಬ್ಬ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದಾನೆ. ಸೋಮವಾರ ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಹೋಗುವ ಬಸ್ಸಿನಲ್ಲಿ ವಿದ್ಯಾರ್ಥಿಗಳ (Students) ಕಿಸೆಯಲ್ಲಿದ್ದ ಮೊಬೈಲ್ ಕದ್ದು ಬಳಿಕ ಮತ್ತೊಬ್ಬನ ಜೇಬಿಗೆ ಕೈಹಾಕುವಾಗ ಸಿಕ್ಕಿ ಬಿದ್ದಿದ್ದಾನೆ.
ಮಂಜು ಎಂಬ ವಿದ್ಯಾರ್ಥಿ ತನ್ನ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡಿದ್ದ. ಚಿತ್ರದುರ್ಗದ ಬಸ್ ಹತ್ತುವಾಗ ಈತನ ಜೇಬಿಗೆ ಯಾರೋ ಕೈಹಾಕುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ವಿದ್ಯಾರ್ಥಿ ಮಂಜು ಮೊಬೈಲ್ ಕಳ್ಳನನ್ನು ಹಿಡಿದುಕೊಂಡಿದ್ದಾನೆ. ಆ ಕಳ್ಳ ಅದಾಗಲೇ ಮೊಬೈಲ್ ಬೇರೆಯವರಿಗೆ ಸಾಗಿಸಿದ್ದ, ಬಳಿಕ ಅಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಮೊಬೈಲ್ ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.
ಮೊಬೈಲ್ ಕಳ್ಳ ಆಂಧ್ರಪ್ರದೇಶದ ವಿಜಯವಾಡದ ಆಟೋ ನಗರದ ನಿವಾಸಿ ಅಜಯಕುಮಾರ್ ಎಂದು ತಿಳಿದು ಬಂದಿದೆ. ಮೊಬೈಲ್ ಕಳ್ಳನ ಜತೆ 3-4 ಜನ ಇರುವ ಶಂಕೆ ವ್ಯಕ್ತವಾಗಿದೆ. ಮೊಬೈಲ್ ಕಳ್ಳನನ್ನು ಹಿಡಿದ ವಿದ್ಯಾರ್ಥಿಗಳು ಮೊದಲು ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Leopard attack: ಬೈಪಾಸ್ ಸರ್ವಿಸ್ ರಸ್ತೆ ಬದಿ ಕದಲದೆ ಕುಳಿತ ಚಿರತೆ; ಮನೆಯಿಂದ ಹೊರಬರದಂತೆ ಎಚ್ಚರಿಕೆ
ನಂತರ ಕೆಎಸ್ಆರ್‌ಟಿಸಿ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಹತ್ತಿರ ಬಂದ ಟ್ರಾಫಿಕ್ ಪಿಎಸ್ಐ ದರಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಚಂದ್ರನಾಯಕ್ ಕಳ್ಳನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.