ಉಡುಪಿ/ಕೋಲಾರ: ಮನೆ ಕಳ್ಳತನ (Theft Case) ಪ್ರಕರಣಗಳಿಗೆ ಭಾಗಿಯಾಗಿದ್ದ ಇಬ್ಬರು ಬಾಲಕರ ಸಹಿತ ನಾಲ್ವರು ಆರೋಪಿಗಳನ್ನು ಪೆರಂಪಳ್ಳಿ ಶೀಂಬ್ರಾ ಕ್ರಾಸ್ ಬಳಿ ಉಡುಪಿಯ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಮೂಡು ಅಲೆವೂರು ಆದರ್ಶ್ ನಗರದ ವರುಣ ಕೊಡಂಚ (19) ಹಾಗೂ ಮೂಡು ಅಲೆವೂರು ನೆಹರೂ ನಗರದ ಕಾರ್ತಿಕ ಪೂಜಾರಿ (19) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಕಳವು ಮಾಡಿದ 2,40,000 ರೂ. ಮೌಲ್ಯದ ಚಿನ್ನಾಭರಣ ಮತ್ತು ಒಂದು ಸ್ಕೂಟರ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಫೆ.18ರಂದು ರಾತ್ರಿ ನೆಹರು ನಗರದ ಮನೆಗೆ ನುಗ್ಗಿದ ಕಳ್ಳರು 2,40,000 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನಲೆಯಲ್ಲಿ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು, ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗಳು ಕುಂದಾಪುರ ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಎರಡು ಪ್ರಕರಣಗಳು ಹಾಗೂ ಮಣಿಪಾಲ ಠಾಣೆಯ ಒಂದು ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಮೂರು ಪ್ರಕರಣಗಳನ್ನು ಭೇದಿಸಿ ಆರೋಪಿತರಿಂದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೇವಾಲಯ ಹುಂಡಿ ಸೇರಿ ಚಿನ್ನಾಭರಣ ಕಳವು
ಕೋಲಾರದ ಚೌಡೇಶ್ವರಿ ದೇವಾಲಯ ಹುಂಡಿ ಜತೆಗೆ ಚಿನ್ನಾಭರಣ ದೋಚಿ ಪರಾರಿ ಆಗಿರುವ ಘಟನೆ ತಡರಾತ್ರಿ ನಡೆದಿದೆ. ಸುಮಾರು 3 ಲಕ್ಷ ರೂ. ಮೌಲ್ಯ ಬೆಲೆ ಬಾಳುವ ಆಭರಣ, 1 ಕೆಜಿಯ ಬೆಳ್ಳಿ ಕಿರೀಟ, ಎರಡು ಚಿನ್ನದ ತಾಳಿ ಹಾಗೂ ಹುಂಡಿಯನ್ನೇ ಕಳ್ಳತನ ಮಾಡಿದ್ದಾರೆ.
ಇನ್ನು ಕಳ್ಳತನಕ್ಕೂ ಮುನ್ನ ದೇಗುಲದ ಪಕ್ಕದಲ್ಲಿದ್ದ ಅರ್ಚಕನ ಮನೆಗೆ ಬೀಗ ಹಾಕಿ ಬಳಿಕ ಕಳ್ಳತನ ಮಾಡಲಾಗಿದೆ. ಅರ್ಚಕರು ಬೆಳಗ್ಗೆ ಮನೆಯಿಂದ ಹೊರ ಬರಲು ಆಗದೆ ಇದ್ದಾಗ ಅಕ್ಕ ಪಕ್ಕದವರನ್ನು ಕರೆದಿದ್ದಾರೆ. ಬಳಿಕ ದೇವಾಲಯಕ್ಕೆ ಹೋಗಿ ನೋಡಿದಾಗ ಬಾಗಿಲು ಮುರಿದು ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿನಿಮಾ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ