Site icon Vistara News

Theft Case: ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದು ಮಹಿಳೆಯರ ತಲೆ ಒಡೆದು ದರೋಡೆ ಮಾಡಿದ ಕಿರಾತಕಿ

theft case in bangalore

ಬೆಂಗಳೂರು: ಇಲ್ಲಿನ ನಂದಿನಿ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಲಗ್ಗೆರೆಯ ಪಾರ್ವತಿ ನಗರದಲ್ಲಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದ ಕಿರಾತಕಿಯೊಬ್ಬಳು ಮಾರಣಾಂತಿಕ ಹಲ್ಲೆ ನಡೆಸಿ, ಚಿನ್ನಾಭರಣ ಕಸಿದು (Theft case) ಪರಾರಿ ಆಗಿದ್ದಾಳೆ. ಶಾಂತಮ್ಮ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ.

ದರೋಡೆ ಮಾಡಲು ಬಂದವಳು ರಾತ್ರಿ ಸಮಯದಲ್ಲೋ ಅಥವಾ ಯಾರೂ ಇಲ್ಲದಿರುವಾಗಲೋ ಬಂದಿದ್ದಲ್ಲ. ಬದಲಿಗೆ ಹಾಡುಹಗಲೇ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾಳೆ. ಲಗ್ಗರೆಯ ಪಾರ್ವತಿನಗರದಲ್ಲಿ ವಾಸವಿದ್ದ ಶಾಂತಮ್ಮ, ಕೋವಿಡ್‌ ಸಮಯದಲ್ಲಿ ಪತಿಯನ್ನು ಕಳೆದುಕೊಂಡಿದರು. ಪತಿ ಅಗಲಿಕೆ ಬಳಿಕ ಒಂಟಿಯಾಗಿದ್ದ ಶಾಂತಮ್ಮ, ನಾಲ್ಕು ಮನೆ ಬಾಡಿಗೆಗೆ ಕೊಟ್ಟಿದ್ದರು.

ಚಿನ್ನಾಭರಣ ಕದ್ದು ಪರಾರಿ ಆಗುತ್ತಿರುವ ಕಳ್ಳಿ

ಇನ್ನು ಎರಡು‌‌ ಮನೆ ಖಾಲಿಯಾಗಿದ್ದರಿಂದ ಮನೆ ಮುಂದು ಬಾಡಿಗೆಗೆ ಮನೆ ಇದೆ ಎಂದು ಬೋರ್ಡ್‌ ಹಾಕಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳಿಯೊಬ್ಬಳು, ಖಾಲಿ ಇರುವ ಮನೆ ಕೇಳುವ ನೆಪದಲ್ಲಿ ಬಂದು ಹಲ್ಲೆ ಮಾಡಿ ಕೊರಳಿನಲ್ಲಿದ್ದ ಚಿನ್ನಾಭರಣ ಕಸಿದು ಪರಾರಿ ಆಗಿದ್ದಾಳೆ.

ಕಳೆದ 15 ದಿನಗಳಿಂದ ಪದೆ ಪದೇ ಬಂದು ಶಾಂತಮ್ಮಳನ್ನು ಪರಿಚಯ ಮಾಡಿಕೊಂಡಿದ್ದಳು. ಪರಿಚಯದ ನೆಪದಲ್ಲಿ ಮನೆಯಲ್ಲಿ ಯಾರು, ಯಾವ ಸಮಯಕ್ಕೆ ಇರುತ್ತಾರೆ ಎಂದು ಗಮನಿಸಿದ್ದಳು. ಶಾಂತಮ್ಮ ಒಬ್ಬರೇ ವಾಸ ಮಾಡುತ್ತಿರುವುದು ತಿಳಿಯುತ್ತಿದ್ದಂತೆ ಸ್ಕೆಚ್‌ ಹಾಕಿದ್ದಾಳೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳಿ ಓಡಾಟ

ಶುಕ್ರವಾರ ಮಟಮಟ ಮಧ್ಯಾಹ್ನ ಬಂದವಳೇ ಈ ಮನೆ ನಮಗೆ ಕೊಡಿ ಎಂದು ಶಾಂತಮ್ಮಳ ಬೆನ್ನು ಬಿದ್ದಿದ್ದಾಳೆ. ಇವತ್ತೆ ಹಾಲು ಉಕ್ಕಿಸಿಕೊಳ್ಳುತ್ತೇವೆ ಎಂದು ಹೇಳುತ್ತಾ, ದೇವರ ಫೋಟೊ ಹಾಕಲು ಜಾಗ ಎಲ್ಲಿದೆ ಎಂದು ಕೇಳಿದ್ದಾಳೆ. ಅದನ್ನೂ ತೋರಿಸುತ್ತಿದ್ದಾಗಲೇ ಹಾಲು ಯಾವ ಜಾಗದಲ್ಲಿ ಉಕ್ಕಿಸಬೇಕೆಂದು ಕೇಳಿದ್ದಾಳೆ.

ಈ ವೇಳೆ ಅಡುಗೆ ಮನೆಯಲ್ಲಿ ಈ ಸ್ಥಳದಲ್ಲಿ ಹಾಲು ಉಕ್ಕಿಸಬಹುದು ಎಂದು ಹೇಳುತ್ತಿದ್ದಂತೆ, ಬ್ಯಾಗ್‌ನಲ್ಲಿ ತಂದಿದ್ದ ಮರದ ಪೀಸ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಳೆ. ಅಡುಗೆ ಮನೆ ಚಿಕ್ಕದಾಗಿ ಇದ್ದ ಕಾರಣ, ಹೊರ ಬರಲು ಆಗಲಿಲ್ಲ. ಮನಬಂದಂತೆ ಹೊಡೆದು, ಬಳಿಕ ಮೈ ಮೇಲೆ ಇದ್ದ ಚಿನ್ನಾಭರಣ ದೋಚಿ ಪರಾರಿ ಆದಳು ಎಂದು ಗಾಯಾಳು ಶಾಂತಮ್ಮ ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ: Weather Report: ಉತ್ತರ ಒಳನಾಡಿನಲ್ಲಿ ವರುಣನಿಗೆ ವಿರಾಮ; ಕರಾವಳಿ, ದಕ್ಷಿಣ ಒಳನಾಡಲ್ಲಿ ಮುಂದುವರಿದ ಮಳೆ

ಸದ್ಯ ನಂದಿನಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರೆಲ್ಲರೂ ಸೇರಿ ಗಾಯಾಳು ಶಾಂತಮ್ಮಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿನ್ನಾಭರಣ ದೋಚಿ ಪರಾರಿ ಆಗುತ್ತಿರುವ ದೃಶ್ಯವೆಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version