ಬೆಂಗಳೂರು ಗ್ರಾಮಾಂತರ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತಸಾಗರವೇ ಹರಿದು ಬಂದಿತ್ತು. ಬಹುತೇಕ ದೇವಸ್ಥಾನದ ಹುಂಡಿಗಳು ತುಂಬಿದ್ದವು. ಇದನ್ನೇ ಟಾರ್ಗೆಟ್ ಮಾಡಿದ ಕಳ್ಳರು ದೇವಸ್ಥಾನದ ಹುಂಡಿಗೆ ಕನ್ನ ಹಾಕಿರುವ (Theft Case) ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ಹೆಸರಘಟ್ಟ ರಸ್ತೆಯ ಚಿಕ್ಕಬಾಣಾವರ ಸಮೀಪದಲ್ಲಿರುವ ಸಂತೆ ಬೀದಿಯ ಶ್ರೀಚನ್ನಕೇಶವಸ್ವಾಮಿ ದೇವಾಲಯದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಸೋಮವಾರ ಮುಂಜಾನೆಯಿಂದ ತಡರಾತ್ರಿವರೆಗೂ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತ್ತು. ದೇವರ ದರ್ಶನಕ್ಕೆ ಅಪಾರ ಭಕ್ತರ ಹಿಂಡೇ ಹರಿದು ಬಂದಿದ್ದು, ಭಕ್ತರು ಕಾಣಿಕೆ ಹಣವನ್ನು ಹುಂಡಿಯಲ್ಲಿ ಹಾಕಿದ್ದರು. ಇದನ್ನೆಲ್ಲ ಗಮನಿಸಿದ ಕಳ್ಳರು ತಡರಾತ್ರಿ ಹೊಂಚು ಹಾಕಿ ದೇವಾಲಯದ ಬೀಗ ಒಡೆದು ಹುಂಡಿಯಲ್ಲಿದ್ದ ಸುಮಾರು 1 ಲಕ್ಷಕ್ಕೂ ಅಧಿಕ ಕಾಣಿಕೆ ಹಣವನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಮನೆಯ ಚಿನ್ನ ಕದ್ದ ಖದೀಮರು
ಇತ್ತ ಬೆಂಗಳೂರು ಹೊರವಲಯ ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ಹಗಲು ಹೊತ್ತಿನಲ್ಲಿಯೇ ರೂಪ ರಾಮಮೂರ್ತಿ ಎಂಬುವರ ಮನೆಯ ಬೀರುವಿನಲ್ಲಿದ್ದ ಸುಮಾರು 1.5 ಲಕ್ಷ ನಗದು, 50 ಸಾವಿರ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಕುಟುಂಬಸ್ಥರು ಪ್ರವಾಸಕ್ಕೆ ತೆರಳಿದ್ದರು. ಆದರೆ, ಮನೆ ಹೊರಗೆ ಬೀಗದ ಕೀಲಿಯನ್ನು ಎಂದಿನಂತೆ ಇಡುವ ಸ್ಥಳದಲ್ಲಿ ಇಟ್ಟು ಹೋಗಿದ್ದರು. ಆ ಕೀಯನ್ನು ಬಳಸಿಕೊಂಡೇ ಕಳ್ಳತನ ಮಾಡಲಾಗಿದೆ. ಕೀ ಇಡುವ ಸ್ಥಳ ನೋಡಿಕೊಂಡ ಯಾರೋ ಪರಿಚಯಸ್ಥರೇ ಈ ಕೃತ್ಯವೆಸಿಗಿದ್ದಾರೆ ಎಂದು ಮನೆಯವರು ಶಂಕಿಸಿದ್ದಾರೆ. ಸೋಮವಾರ ಮಧ್ಯಾಹ್ನ ನಡೆದ ಘಟನೆ ಮಂಗಳವಾರ ಬೆಳಗ್ಗೆ ಗೊತ್ತಾಗಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Shiradi Ghat | ಮತ್ತೆ ಎದ್ದು ಬಂತು ಶಿರಾಡಿ ಸುರಂಗ ಮಾರ್ಗ! ಏಪ್ರಿಲ್‌ನೊಳಗೆ ಡಿಪಿಆರ್ ಅಂತಿಮ ಅಂದ್ರು ನಿತಿನ್ ಗಡ್ಕರಿ!