Site icon Vistara News

Vistara Impact : ಸ್ಮಶಾನದ ಕಚೇರಿ ಬಾಗಿಲು ಮುರಿದು ಹಣ ಎಗರಿಸಿದ ಭೂಪ ಅರೆಸ್ಟ್‌

theft Arrested in gadaga

ಗದಗ: ಇಲ್ಲಿನ ಹೊಂಬಳ ರಸ್ತೆಯ ಮುಕ್ತಿಧಾಮದ ಕಚೇರಿಯಲ್ಲಿ ಕಳ್ಳತನ ಪ್ರಕರಣ ನಡೆದು 2 ತಿಂಗಳಾದರೂ ಕಳ್ಳನ ಸುಳಿವೇ ಸಿಕ್ಕಿರಲಿಲ್ಲ. ಈ ಬಗ್ಗೆ ವಿಸ್ತಾರ ನ್ಯೂಸ್‌ ವರದಿ ಮಾಡಿತ್ತು. ಇದೀಗ ಪೊಲೀಸರು ಖದೀಮನ ಹೆಡೆಮುರಿ ಕಟ್ಟಿದ್ದಾರೆ. ಅಲ್ತಾಫ್ ಅಬ್ದುಲ್ ಹಮೀದ ಉಸ್ತಾದ ಬಂಧಿತ ಖದೀಮನಾಗಿದ್ದಾನೆ.

ಮೇ 11 ರಂದು ಗದಗ ನಗರದ ಮುಕ್ತಿಧಾಮ ಕಚೇರಿಯಲ್ಲಿ ಕಳ್ಳತನ ನಡೆದಿತ್ತು. ಅಂತ್ಯ ಸಂಸ್ಕಾರದ ಸಂಬಂಧ ಸಂಗ್ರಹವಾಗಿದ್ದ 75,000 ರೂ.ಗಳನ್ನು ಕದ್ದು ಪರಾರಿಯಾಗಿದ್ದ. ಸ್ಮಶಾನದಲ್ಲಿ ಕಚೇರಿ ಬಾಗಿಲು ಮುರಿದು ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇತ್ತ ಘಟನೆ ನಡೆದು ಎರಡು ತಿಂಗಳಾದರೂ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನು ವಿಸ್ತಾರ ನ್ಯೂಸ್‌ ವರದಿ ಮಾಡಿ ಪ್ರಶ್ನೆ ಮಾಡಿತ್ತು. ಕೊನೆಗೆ ಎಫ್‌ಐಆರ್‌ ದಾಖಲಿಸದ್ದಕ್ಕೆ ಗದಗ ಎಸ್‌ಪಿ ಬಿ.ಎಸ್. ನೇಮಗೌಡ ಅವರು ಶಹರ ಪೊಲೀಸ್ ಠಾಣೆ ಇನ್ಸಪೆಕ್ಟರ್‌ಗೆ ಕಾರಣ‌ ಕೇಳಿ ನೋಟಿಸ್‌ ನೀಡಿದ್ದರು.

ಇದನ್ನೂ ಓದಿ: Weather Report : ರಾಜ್ಯಾದ್ಯಂತ 5 ದಿನ ಮಿಂಚಿನ ಜತೆ ಹಗುರು ಮಳೆ!

ವರದಿ ಮಾಡಿದ್ದ ವಿಸ್ತಾರ ನ್ಯೂಸ್‌

ಈ ಸಂಬಂಧ ವಿಸ್ತಾರ ನ್ಯೂಸ್‌ ಜುಲೈ 19ರಂದು ಸುದ್ದಿಯನ್ನು ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ ದಿನವೇ ತರಾತುರಿಯಲ್ಲಿ ಶಹರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಸದ್ಯ ನಗದು ಹಾಗೂ ಹಲವು ವಸ್ತುಗಳ‌ ಸಮೇತ ಕಳ್ಳನನ್ನು ಪೊಲೀಸರು ಆಗಸ್ಟ್‌ 10ರಂದು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿಯೂ 2,40,000 ರೂ. ಎಗರಿಸಿದ್ದ. ಸದ್ಯ ಪೊಲೀಸರು ಎಲ್ಲವನ್ನೂ ವಶಕ್ಕೆ ಪಡೆದಿದ್ದು, ಕಲಂ: 379 ಐಪಿಸಿ ಮತ್ತು ಗುನ್ನಾ ನಂ- 99/ 2023, ಕಲಂ 457, 380 ಐಪಿಸಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

75,000 ರೂ. ಕಳ್ಳತನ

ಅಂತ್ಯಸಂಸ್ಕಾರಕ್ಕೆಂದು ಪಡೆದ ಹಣವನ್ನು ಸ್ಮಶಾನದ ಕಚೇರಿಯಲ್ಲಿ ವ್ಯವಸ್ಥಾಪಕ ನೀಲಕಂಠ ಅವರು ಸಂಗ್ರಹಿಸಿಟ್ಟಿದ್ದರು. ಪ್ರತಿ ನಿತ್ಯ ಅಂತ್ಯ ಸಂಸ್ಕಾರಕ್ಕೆ ಇಂತಿಷ್ಟು ಹಣ‌ ಪಡೆದು ಮುಕ್ತಿಧಾಮದ ಕಚೇರಿಯಲ್ಲಿ ಸಂಗ್ರಹಿಸಿಡುತ್ತಿದ್ದರು. ಹೀಗೆ ಸಂಗ್ರಹಿಸಿದ್ದ ಸುಮಾರು 75,000 ಹಣವನ್ನು ಕಳ್ಳ ಎಗರಿಸಿಕೊಂಡು ಹೋಗಿದ್ದ.

ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಪೊಲೀಸರು ಧಾವಿಸಿ ವಿಚಾರಣೆ ನಡೆಸಿದ್ದರು. ನಂತರ ಮುಕ್ತಿಧಾಮದ ವ್ಯವಸ್ಥಾಪಕ ನೀಲಕಂಠ ಕಾಳೆ ಶಹರ ಪೊಲೀಸರಿಗೆ ದೂರು ನೀಡಿದ್ದರು. ಆದರೆ 2 ತಿಂಗಳಾದರೂ ಪ್ರಕರಣದ ತನಿಖೆ ನಡೆದಿಲ್ಲ ಎನ್ನಲಾಗಿತ್ತು. ಸದ್ಯ ಕಳ್ಳನನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version