Site icon Vistara News

Theft Case: ಮದುವೆ ಒಡವೆ ಕದ್ದವರು ಮಾವನ ಮನೆಗೆ ಅತಿಥಿಯಾದರು!

Thieves arrested for stealing gold ornaments from car, fleeing to Chittoor

Thieves arrested for stealing gold ornaments from car, fleeing to Chittoor

ಆನೇಕಲ್: ಕಾರಿನ ಗ್ಲಾಸ್ ಒಡೆದು ವಜ್ರ ಹಾಗೂ ಚಿನ್ನಾಭರಣ ದೋಚಿ (Theft Case) ಪರಾರಿ ಆಗಿದ್ದ ಖದೀಮರನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ. ಪಾಂಡುರಂಗ ಹಾಗೂ ಅಂಕಯ್ಯ ಚಿತ್ತೂರಿನವರಾಗಿದ್ದು, ಕದಿಯುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದರು.

ಕಳೆದ ಫೆಬ್ರವರಿ 23ರಂದು ಜಲಜಾಕ್ಷಿ ಹಾಗೂ ಲಕ್ಷ್ಮೀನಾರಾಯಣ ಎಂಬುವವರು ತಮ್ಮ ಮಗಳ ಮದುವೆಗಾಗಿ ಬ್ಯಾಂಕಿನ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣವನ್ನು ತರಲು ಹೋಗಿದ್ದರು. ಅತ್ತಿಬೆಲೆಯ ಯೂನಿಯನ್ ಬ್ಯಾಂಕಿನಿಂದ ಚಿನ್ನಾಭರಣ ತೆಗೆದುಕೊಂಡು ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು. ಇವರನ್ನು ಈ ಇಬ್ಬರು ಖದೀಮರು ಹಿಂಬಾಲಿಸಿದ್ದರು.

ಈ ದಂಪತಿ ದಾರಿ ಮಧ್ಯೆ ಮನೆಗೆ ಬೇಕಾದ ವಸ್ತು ಖರೀದಿಸಲು ಸರ್ಜಾಪುರದ ಮುತ್ತಾನಲ್ಲೂರು ಬಳಿ ಕಾರು ನಿಲ್ಲಿಸಿದ್ದರು. ಈ ಸಮಯವನ್ನೇ ಹೊಂಚು ಹಾಕಿ ಕಾಯುತ್ತಿದ್ದ ಇಬ್ಬರು ಕ್ಷಣಾರ್ಧದಲ್ಲೇ ಕಾರಿನ ಗಾಜು ಒಡೆದು ಚಿನ್ನ, ವಜ್ರದ ಬ್ಯಾಗ್‌ ಅನ್ನು ಕದ್ದು ಪರಾರಿ ಆಗಿದ್ದರು. ಇನ್ನು ಕಳ್ಳತನದ ದೃಶ್ಯವೆಲ್ಲ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇತ್ತ ಚಿನ್ನಾಭರಣ ಕಳೆದುಕೊಂಡ ದಂಪತಿ ಈ ಸಂಬಂಧ ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಚಿನ್ನಾಭರಣ ಕಳ್ಳರನ್ನು ವಶಕ್ಕೆ ಪಡೆದ ಪೊಲೀಸರು

ದೂರು ದಾಖಲಿಸಿಕೊಂಡಿದ್ದ ಸರ್ಜಾಪುರ ಪೊಲೀಸರು ಚಿತ್ತೂರು ಓಜಿಕೊಪ್ಪಂ ಗ್ರಾಮದಲ್ಲಿ ಅಡಗಿದ್ದ ಪಾಂಡುರಂಗ ಹಾಗೂ ಅಂಕಯ್ಯನನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 703 ಗ್ರಾಂ ವಜ್ರದ ಆಭರಣ ಹಾಗೂ ಚಿನ್ನ ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಬೆನ್ನಿಗೆ ಬಿದ್ದಿದ್ದಾರೆ. ಈ ಕೃತ್ಯದಲ್ಲಿ ನಾಲ್ವರು ಭಾಗಿಯಾಗಿದ್ದು, ಇಬ್ಬರು ಆರೋಪಿಗಳು ಸೆರೆಯಾಗಿದ್ದರೆ, ಮತ್ತಿಬ್ಬರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಸರ್ಜಾಪುರದಲ್ಲಿ ಹೆಚ್ಚುವರಿ ಎಸ್‌ಪಿ ಪುರುಷೋತ್ತಮ್ ಮಾಹಿತಿ ನೀಡಿದ್ದಾರೆ. ಇನ್ನು ವಶಪಡಿಸಿಕೊಂಡ ಚಿನ್ನಾಭರಣವನ್ನು ಮಾಲೀಕರಿಗೆ ಹಸ್ತಾಂತರ ಮಾಡಿ, ಕಳ್ಳರನ್ನು ಪತ್ತೆ ಹಚ್ಚಿದ ಪೊಲೀಸ್‌ ಸಿಬ್ಬಂದಿಗೆ ಅಭಿನಂದಿಸಿದ್ದಾರೆ.

ಇದನ್ನೂ ಓದಿ: Bengaluru karaga 2023: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ ಉತ್ಸವ; ಚುನಾವಣೆ ನೀತಿ ಸಂಹಿತೆಯ ಎಫೆಕ್ಟ್‌ ಏನು?

ಬೈಕ್‌ ಕಳ್ಳನ ಬಂಧನ

ಕೆಂಗೇರಿ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ. ಮಂಜುನಾಥ್ ಅಲಿಯಾಸ್‌ ಮಂಜ ಬಂಧಿತ ಆರೋಪಿ ಆಗಿದ್ದಾನೆ. ಮನೆ ಮುಂದೆ ಯಾವುದೇ ಬೈಕ್‌ಗಳನ್ನು ಕಂಡರೂ ಸಾಲೀಸಾಗಿ ಕದ್ದು ಪರಾರಿ ಆಗುತ್ತಿದ್ದ. ಕದ್ದ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬಂಧಿತ‌ನಿಂದ 2 ಲಕ್ಷ ಮೌಲ್ಯದ 6 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಹಲವು ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

Exit mobile version