ಕೋಲಾರ: ಇಲ್ಲಿನ ಶ್ರೀನಿವಾಸಪುರ ತಾಲೂಕಿನ ರೋಣೂರು ಗ್ರಾಮದಲ್ಲಿ ಕದಿಯಲು ಬಂದ ಕಳ್ಳರಿಗೆ ಗ್ರಾಮಸ್ಥರು (Theft Case) ಧರ್ಮದೇಟು ನೀಡಿದ್ದಾರೆ. ತೋಟದ ಪಂಪ್‌ಹೌಸ್‌ನಲ್ಲಿ ಕೇಬಲ್, ಮೋಟಾರ್, ಬೆಳೆಬಾಳುವ ಪ್ಯಾನಲ್ ಬೋರ್ಡ್‌ಗಳ ಕಳ್ಳತನಕ್ಕೆ ಯತ್ನಿಸುವಾಗಲೇ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.
ಕೃಷಿ ಹೊಂಡದಲ್ಲಿನ ಮೋಟಾರು ಕಳ್ಳತನಕ್ಕೆ ಮುಂದಾಗಿದ್ದ ಇಬ್ಬರು ಕಳ್ಳರನ್ನು ಹಿಡಿದು ಚೈನ್‌ನಿಂದ ಗ್ರಾಮಸ್ಥರು ಕಟ್ಟಿಹಾಕಿದ್ದರು. ಬಳಿಕ ಇಬ್ಬರಿಗೂ ಥಳಿಸಿ, ಪಂಪ್ ಶೆಡ್‌ನಲ್ಲಿ ಕೂಡಿಹಾಕಿದರು. ಗ್ರಾಮದ ರವಿ ಎಂಬುವವರ ಪಂಪ್ ಸೆಟ್ ಮೋಟಾರ್ ಕಳ್ಳತನ ವೇಳೆ ಮುಜಾಹಿದ್ ಮತ್ತು ರತೀಜ್ ಎಂಬಿಬ್ಬರು ಸಿಕ್ಕಿಬಿದ್ದಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಆಗಮಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಯಿತು. ಪರಿಸ್ಥಿತಿ ಕೈಮೀರಿದಾಗ ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ನಾರಾಯಣ ಸ್ವಾಮಿ ಧಾವಿಸಿದರು.
ಇದನ್ನೂ ಓದಿ: POCSO Case: ಪೋಕ್ಸೋ ಆರೋಪಿಗೆ ಅನುಕೂಲ ಮಾಡಲು 3 ಲಕ್ಷಕ್ಕೆ ಬೇಡಿಕೆ ಇಟ್ಟ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಬಲೆಗೆ
ಈ ವೇಳೆ ಗ್ರಾಮಸ್ಥರ ಹಾಗೂ ಪೊಲೀಸರ ನಡುವೆ ಹಗ್ಗಜಗ್ಗಾಟ ನಡೆದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ವಾತಾವರಣವನ್ನು ತಿಳಿಗೊಳಿಸಲು ಸಿಪಿಐ ನಾರಾಯಣ ಸ್ವಾಮಿ ತಮ್ಮ ರಿವಾಲ್ವಾರ್ ಗನ್ ತಗೆದು ಗ್ರಾಮಸ್ಥರ ಕಡೆ ತೋರಿಸಿ, ಕಳ್ಳರನ್ನು ವಶಕ್ಕೆ ಪಡೆದುಕೊಂಡರು. ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.