Site icon Vistara News

Theft Case : ಕಳ್ಳರ ಕಾಟ; ದೊಣ್ಣೆ ಹಿಡಿದು ರಾತ್ರಿ ಗಸ್ತಿಗೆ ನಿಂತ ಬೆಳಗಾವಿ ಮಂದಿ!

theft Case in Belgavi

ಬೆಳಗಾವಿ: ಬೆಳಗಾವಿಯಲ್ಲಿ ರಾತ್ರಿ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮನೆ ವಸ್ತುಗಳೆಲ್ಲವೂ ಕಳ್ಳರ ಪಾಲಾಗುತ್ತಿವೆ. ಇದು ಜನರ ನಿದ್ದೆಗೆಡಿಸಿದೆ. ಸಾಲಸೋಲ ಮಾಡಿ ಚಿನ್ನಾಭರಣ ಖರೀದಿಸಿದರೆ, ಕಳ್ಳರು ಕದ್ದು ಹೋಗುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಆ ಏರಿಯಾದ ಯುವಕರೇ ಸೇರಿ ಕಳ್ಳರನ್ನು ಬಗ್ಗು ಬಡಿಯಲು ಮುಂದಾಗಿದ್ದಾರೆ.

ಸರಣಿ ಕಳ್ಳತನದಿಂದ ಕುಂದಾನಗರಿ ಬೆಳಗಾವಿ ಮಂದಿಯ ಕಂಗೆಟ್ಟು ಹೋಗಿದ್ದಾರೆ. ಕೇವಲ ಮೂರೇ ದಿನದಲ್ಲಿ ಸುಮಾರು 14ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ವರದಿ ಆಗಿವೆ. ನಿರಂತರ ಸರಣಿ ಕಳ್ಳತನದಿಂದ ಹೈರಾಣಾಗಿರುವ ಜನರು ಇದೀಗ ತಮ್ಮನ್ನೂ, ತಮ್ಮ ಮನೆಯನ್ನು ರಕ್ಷಿಸಿಕೊಳ್ಳಲು ಕೈಯಲ್ಲಿ ಕೋಲು, ದೊಣ್ಣೆ, ಕಬ್ಬಿಣದ ಸಾಲಾಕೆಯನ್ನು ಹಿಡಿದು ಗಸ್ತು ಆರಂಭಿಸಿದ್ದಾರೆ.

ಸ್ವಯಂ ರಕ್ಷಣೆಗೆ ಮುಂದಾದ ಜನರು ತಂಡೋಪತಂಡವಾಗಿ ರಾತ್ರಿಯಿಡಿ ಕಾಲೋನಿ ರಕ್ಷಣೆಗೆ ನಿಂತಿದ್ದಾರೆ. ಬೆಳಗಾವಿಯ ಪಾರಿಜಾತ ನಗರ, ಸಮೃದ್ಧಿ ನಗರ, ಸಾಯಿ ಕಾಲೋನಿ, ಆನಂದ ನಗರ ಹಾಗೂ ಕೇಶವ ನಗರ, ವಡಗಾಂವ, ಅಂಬೇಡ್ಕರ್ ನಗರ ಕನಕದಾಸ ಕಾಲೋನಿ ಸೇರಿ ಹಲವೆಡೆ ಕಳ್ಳತನ ಪ್ರಕರಣಗಳು ವರದಿ ಆಗಿವೆ. ಕಳೆದ ಮೂರು ದಿನಗಳಲ್ಲಿ 14 ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರಿಗೂ ಚಳ್ಳೆಹಣ್ಣು ತಿನಿಸುತ್ತಿರುವ ಖದೀಮ

ಒಬ್ಬನೇ ವ್ಯಕ್ತಿ ಕಳ್ಳತನ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿರುವ ಖದೀಮ ಯಾರ ಕೈಗೂ ಸಿಕ್ಕಿಲ್ಲ. ಈವರೆಗೆ ಅಂದಾಜು 30ಲಕ್ಷಕ್ಕೂ ಅಧಿಕ ಹಣ, ಚಿನ್ನಾಭರಣ ದೋಚಿ ಪರಾರಿ ಆಗಿದ್ದಾನೆ. ಪೊಲೀಸರಿಗೂ ಈ ಖತರ್ನಾಕ್ ಕಳ್ಳ ಸವಾಲವಾಗಿ ಪರಿಣಮಿಸಿದ್ದಾನೆ. ಕಳ್ಳನ ಬಂಧನಕ್ಕೆ ಬೆಳಗಾವಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಕಳ್ಳನ ಹೆಡೆಮುರಿ ಕಟ್ಟಲು ಪಟತೊಟ್ಟಿದ್ದಾರೆ. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ

ಬನ್ನೇರುಘಟ್ಟ ಸಮೀಪದ ಗೊಟ್ಟಿಗೆರೆಯ ಜಂಬೂ ಸವಾರಿ ದಿಣ್ಣೆ ಬಳಿ ತಡರಾತ್ರಿ ಖದೀಮರು ಕೈಚಳಕ ತೋರಿದ್ದಾರೆ. ಬೆಂಗಳೂರು- ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆಯ ಜಂಬೂಸವಾರಿ ದಿಣ್ಣೆಯಲ್ಲಿ ಮೂರು ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.

ಮೂರು ಟಾಟಾ ಏಸ್ ವಾಹನಗಳಲ್ಲಿ ಬಂದಿದ್ದ ಕಳ್ಳರು, ಹೋಟೆಲ್, ಟೆಂಟ್ ಹೌಸ್, ದಿನಸಿ ಅಂಗಡಿ ಬೀಗ ಮುರಿದಿದ್ದಾರೆ. ಅಂಗಡಿಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ನಗದನ್ನು ಕದ್ದಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version