ಬೆಂಗಳೂರು: ಇಲ್ಲಿನ ಆನಂದ್ ರಾವ್ ಸರ್ಕಲ್ ಬಳಿ ಕಳ್ಳರಿಬ್ಬರು ಪೊಲೀಸರೆಂದು ಹೇಳಿ 1 ಕೋಟಿ 12 ಲಕ್ಷ ಮೌಲ್ಯದ ಚಿನ್ನದ ಗಟ್ಟಿಯನ್ನು ದೋಚಿದ್ದಾರೆ (Theft Case).. ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಎಂಬುವವರು ಚಿನ್ನದ ಗಟ್ಟಿ ಕಳೆದುಕೊಂಡವರು.
ಅಬ್ದುಲ್ ರಜಾಕ್, ಮಲ್ಲಯ್ಯ ಹಾಗೂ ಸುನೀಲ್ ರಾಯಚೂರಿನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಲೀಕರ ಸೂಚನೆಯಂತೆ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಬಂದಿದ್ದರು. ಸುಮಾರು 2 ಕೆ.ಜಿ 200 ಗ್ರಾಂ ತೂಕದ ಚಿನ್ನದ ಗಟ್ಟಿ ಖರೀದಿ ಮಾಡಿ ಬಸ್ಸಿನಲ್ಲಿ ಕುಳಿತಿದ್ದರು.
ಈ ವೇಳೆ ಸುನೀಲ್ ಬಸ್ಸಿನಲ್ಲಿ ಕುಳಿತಿದ್ದರೆ, ಚಿನ್ನದ ಗಟ್ಟಿ ಇದ್ದ ಬ್ಯಾಗ್ ಸಮೇತ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಶೌಚಾಲಯಕ್ಕೆ ಹೊರಟಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ತಾವು ಪೊಲೀಸರೆಂದು ಹೇಳಿ ಅವರನ್ನು ತಡೆದಿದ್ದಾರೆ. ಇಬ್ಬರ ಬಳಿಯಿದ್ದ ಚಿನ್ನದ ಬ್ಯಾಗ್ ಕಸಿದು ಡಿಸಿ ಕಚೇರಿಗೆ ಹೋಗುವಂತೆ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.
ಇದನ್ನೂ ಓದಿ: Sumangala s mummigatti : ಹಿರಿಯ ಲೇಖಕಿ ಸುಮಂಗಳಾ ಎಸ್ ಮುಮ್ಮಿಗಟ್ಟಿ ನಿಧನ
ಡಿಸಿ ಕಚೇರಿಗೆ ಹೋಗಿ ವಿಚಾರಿಸಿದಾಗ ತಮಗೆ ವಿಷಯವೇ ಗೊತ್ತಿಲ್ಲ ಎಂದು ಹೇಳಿದರು. ಆಗ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಸದ್ಯ ಉಪ್ಪಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ