ಶಿರಸಿ/ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆಮನೆ ಗ್ರಾಮದಲ್ಲಿ ದುಷ್ಕರ್ಮಿಗಳು ಮನೆ ದೋಚಲು (Theft Case) ಬಂದವರು ಬಂದವರು ಹಲ್ಲೆ ಮಾಡಿ ಪರಾರಿ ಆಗಿದ್ದಾರೆ. ಹಾಗಂತ ಇವರು ಎಲ್ಲರೂ ಮಲಗಿದ್ದ ವೇಳೆಯೋ? ಅಥವಾ ಯಾರೂ ಇಲ್ಲದಿರುವಾಗಲೋ ಬಂದಿದ್ದಲ್ಲ. ಎಲ್ಲರೂ ಮನೆಯಲ್ಲಿ ಇರುವಾಗಲೇ ಕೈಯಲ್ಲಿ ಲಗ್ನ ಪತ್ರಿಕೆ ಹಿಡಿದು ಮದುವೆಗೆ ಕರೆಯುವ ನೆಪದಲ್ಲಿ ಬಂದು ದರೋಡೆಗೆ ಯತ್ನಿಸಿದ್ದಾರೆ.
ಲಗ್ನ ಪತ್ರಿಕೆ ಕೊಡುವ ಸೋಗಿನಲ್ಲಿ ಬಂದಿದ್ದು, ಈ ವಿಷಯವನ್ನು ಮನೆಯ ಹೊರಗಿನಿಂದ ಹೇಳಿದ್ದಾರೆ. ಆಗ ಮನೆ ಮಾಲೀಕರು ಬಾಗಿಲು ತೆರೆದಿದ್ದಾರೆ. ತಕ್ಷಣವೇ ಒಳಗೆ ನುಗ್ಗಿದ ದುಷ್ಕರ್ಮಿಗಳು ಚಾಕು ತೋರಿಸಿ ಹಣ, ಒಡವೆ ದೋಚಲು ಮುಂದಾಗಿದ್ದಾರೆ.
ಗ್ರಾಮದ ಜಿ.ಆರ್. ಹೆಗಡೆ ಎಂಬುವರ ಮನೆಗೆ ಕನ್ನ ಹಾಕಲು ಕಳ್ಳರು ಯತ್ನಿಸಿದ್ದಾರೆ. ಬಾಗಿಲು ತೆರೆದ ಜಿ.ಆರ್. ಹೆಗಡೆ ಅವರು ದುಷ್ಕರ್ಮಿಗಳು ಚಾಕು ತೋರಿದರೂ ಎದೆಗುಂದದೆ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಮಾತಿನ ಚಕಮಕಿಯಾಗಿದೆ. ಆಗ ಕೂಡಲೆ ದುಷ್ಕರ್ಮಿಗಳು ಹೆಗಡೆ ಆವರ ಮೇಲೆ ಚಾಕುವಿನಿಂದ ಹಲ್ಲಗೆ ಮುಂದಾಗಿದ್ದಾರೆ. ಚಾಕು ಬೀಸಿದ್ದ ವೇಳೆ ಹೆಗಡೆ ಅವರು ಕೈ ಅಡ್ಡ ಇಟ್ಟಿದ್ದರಿಂದ ಅವರ ಕೈಗೆ ಸ್ವಲ್ಪ ಗಾಯಗಳಾಗಿವೆ. ಈ ವೇಳೆ ಹೆಗಡೆ ಅವರು ಕೂಗಿಕೊಂಡಿದ್ದು, ಹೆಗಡೆ ಅವರ ಪುತ್ರ ಬರುತ್ತಿದ್ದಂತೆ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ. ಶುಕ್ರವಾರ ತಡ ರಾತ್ರಿ ಘಟನೆ ನಡೆದಿದ್ದು, ಕಳ್ಳರ ಕೃತ್ಯವು ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇಂಥದ್ದೊಂದು ಗುಂಪಿನ ಹಿಂದೆ ಬಿದ್ದಿದ್ದಾರೆ.
ಖತರ್ನಾಕ್ ಬೈಕ್ ಕಳ್ಳನ ಬಂಧನ
ಮನೆ ಮುಂದೆ ನಿಲ್ಲಿಸಿರುವ ವಾಹನಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್‌ನ ಸೈಡ್ ಲಾಕ್ ಅನ್ನು ಕಾಲಿನಲ್ಲಿ ಮುರಿದು ವಾಹನ ಕದಿಯುತ್ತಿದ್ದ ನಿತಿನ್ (20) ಎಂಬಾತನನ್ನು ಬಂಧಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ನಟೋರಿಯಸ್ ಆಗಿ ಬೆಳೆದಿರುವ ಈತನಿಂದ ಆರು ಲಕ್ಷ ಮೌಲ್ಯದ ಹನ್ನೆರಡು ದ್ವಿಚಕ್ರವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಲಾಸಿಪಾಳ್ಯ, ಸಿದ್ದಾಪುರ, ಚಂದ್ರಾಲೇಔಟ್ ಸೇರಿದಂತೆ 12 ಕಡೆ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ನಿಖಿಲ್ ಜತೆ ಮತ್ತೊಬ್ಬ ಆರೋಪಿ ಇದ್ದು, ಸಿದ್ದಾಪುರ ಪೊಲೀಸರು ಆತನ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಜೈಲುಪಾಲು
ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆ ನಿವಾಸಿಗಳಾಗಿರುವ ಶಮಂತ (30), ಸಂದೀಪ್ (27) ಇಬ್ಬರು ಗೂಂಡಾ ಕಾಯ್ದೆಯಡಿ ಜೈಲು ಪಾಲಾಗಿದ್ದಾರೆ. ಕೊಲೆ, ಕೊಲೆಗೆ ಯತ್ನ, ದರೋಡೆ, ಹಲ್ಲೆ, ದೊಂಬಿ, ಕೋಮು ಗಲಭೆ ಮತ್ತು ಗಾಂಜಾ ಮಾರಾಟದಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Lokayukta raid : ಶಾಸಕ ಮಾಡಾಳು ಚನ್ನೇಶಪುರ ಮನೆಗೂ ಲೋಕಾಯುಕ್ತ ಲಗ್ಗೆ; 3 ಲಕ್ಷ ರೂ. ನಗದು, ಬೆಳ್ಳಿ, ಬಂಗಾರ ಪತ್ತೆ
ಮಾತ್ರವಲ್ಲದೆ ತಂಡ ಕಟ್ಟಿಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದರು. ಹೀಗಾಗಿ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಮೇರೆಗೆ ಬಳ್ಳಾರಿ ಕಾರಾಗೃಹದಲ್ಲಿ 1 ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದೆ.
ಕರ್ನಾಟಕದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ