ವಿಜಯಪುರ: ಕಳ್ಳನೊಬ್ಬ ಕೆಎ 01 ಎಂಸಿ 0973 ನಂಬರ್‌ನ ಸ್ಯಾಂಟ್ರೋ ಕಾರಿನಲ್ಲಿ ಬರುತ್ತಿದ್ದಾನೆ. ಅವನು ಟೋಲ್‌ಗೇಟ್ ದಾಟಿಯೇ ಹೊಗಬೇಕು. ಹೀಗಾಗಿ ಅವನು ಬಂದ ಕೂಡಲೇ ಹಿಡಿದಿಟ್ಟುಕೊಳ್ಳಿ ಎಂದು ಇಳಕಲ್ ಪೊಲೀಸರು ಕರೆ ಮಾಡಿ ಹೇಳಿದ್ದರಿಂದ ಟೋಲ್ ಸಿಬ್ಬಂದಿಯೂ ಅಲರ್ಟ್ ಆಗಿದ್ದರು. ಆದರೆ, ಅಲ್ಲಿಗೆ ಬಂದ ಕಳ್ಳನಿಗೆ (Theft case) ತನ್ನನ್ನು ಹಿಡಿಯಲು ಪ್ಲ್ಯಾನ್ ಮಾಡಿದ್ದಾರೆಂದು ಗೊತ್ತಾಗುತ್ತಿದ್ದಂತೆ ಚಳ್ಳೆಹಣ್ಣು ತಿನ್ನಿಸಿ ಓಡಿದ್ದಾನೆ.
ವಿಜಯಪುರದ ಕಸಬಾ ಟೋಲ್‌ಗೇಟ್ ಬಳಿ ಈ ಘಟನೆ ನಡೆದಿದೆ. ಕಳ್ಳನ ಸೆರೆಗೆ ಟೋಲ್‌ಗೇಟ್ ಸಿಬ್ಬಂದಿ ಹರಸಾಹಸಪಟ್ಟರೂ ಯಶಸ್ವಿಯಾಗಲಿಲ್ಲ. ಇಳಕಲ್‌ನಿಂದ ಕಾರ್ ಮೂಲಕ ಕಳ್ಳ ಹೊರಟಿದ್ದ. ಇವನ ಹಿಂದೆಯೇ ಪೊಲೀಸರು ಬಂದರೂ ಹಿಡಿಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಟೋಲ್‌ಗೇಟ್ ಸಿಬ್ಬಂದಿಗೆ ಕರೆ ಮಾಡಿದ್ದ ಪೊಲೀಸರು ಆತನನ್ನು ಅಲ್ಲಿಯೇ ಹಿಡಿದಿಟ್ಟುಕೊಳ್ಳಲು ಸೂಚಿಸಿದ್ದರು.
ಪೊಲೀಸರ ಅಣತಿಯಂತೆ ಟೋಲ್ ಸಿಬ್ಬಂದಿ ಸ್ಯಾಂಟ್ರೋ ಕಾರಿಗಾಗಿ ಕಾದು ಕುಳಿತಿದ್ದರು. ಸ್ಯಾಂಟ್ರೋ ಕಾರು ಬರುತ್ತಿದ್ದಂತೆ ಟೋಲ್‌ಗೇಟ್ ಬಳಿ ಸಿಬ್ಬಂದಿ ತಡೆದಿದ್ದಾರೆ. ಆಗ ಜಾಗೃತನಾದ ಕಳ್ಳ ಚಾಕು ಹಿಡಿದುಕೊಂಡು ಕೆಳಗೆ ಇಳಿದು ಟೋಲ್‌ಗೇಟ್ ಸಿಬ್ಬಂದಿಗೆ ಬೆದರಿಸಿದ್ದಾನೆ. ಆದರೆ, ಮುಖಕ್ಕೆ ಮಾಸ್ಕ್ ಹಾಕಿ ಬಂದಿದ್ದರಿಂದ ಆತನ ಚಹರೆ ಪತ್ತೆಯಾಗಿಲ್ಲ.
ಇದನ್ನೂ ಓದಿ | Ramcharitmanas Row | ಬಿಹಾರದಲ್ಲಿ ಆರ್ಜೆಡಿ-ಜೆಡಿಯು ಮಧ್ಯೆ ಬಿರುಕು ಮೂಡಿಸಿದ ರಾಮಚರಿತಮಾನಸ ವಿವಾದ
೪ ಕಿ.ಮೀ. ಓಡಿ ಹೋದ ಕಳ್ಳ
ಇಷ್ಟಾದರೂ ಟೋಲ್ ಸಿಬ್ಬಂದಿ ಕಳ್ಳನ ಹಿಂದೆ ಬಿದ್ದರು. ಆತನೂ ಸಹ ಮಿಂಚಿನ ವೇಗದಲ್ಲಿ 4 ಕಿ.ಮೀ.ವರೆಗೆ ಆತ ಓಡಿ ಹೋಗಿದ್ದರಿಂದ ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ, ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಇಳಕಲ್ ಪೊಲೀಸರು, ಕಳ್ಳತನಗೈದಿದ್ದ ಬ್ಯಾಗ್ ಸೇರಿದಂತೆ ಚಾಕು, ಕತ್ತರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅನ್ಸಾರಿ ಎಂಬುವವರ ಹೆಸರಿನಲ್ಲಿ ಕಾರು ನೋಂದಣಿಯಾಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಾರಿನ ಮಾಲೀಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಆತನೇ ಕಳ್ಳನೇ ಅಥವಾ ಅದೂ ಸಹ ಕದ್ದ ಕಾರೇ ಎಂಬುದು ತಿಳಿದುಬಂದಿಲ್ಲ. ಸದ್ಯ ಕಳ್ಳನ ಪತ್ತೆಗೆ ಇಳಕಲ್ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ | Nitin Gadkari : ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ; ಹಿಂಡಲಗಾ ಜೈಲಿನಲ್ಲಿ 2ನೇ ದಿನವೂ ತನಿಖೆ ಮುಂದುವರಿಕೆ