ಮಡಿಕೇರಿ: ಯಾವುದೇ ಪಕ್ಷಗಳ ಸಮಾವೇಶ, ರ‍್ಯಾಲಿಗಳು ಎಂದರೆ ಸಾವಿರಾರು ಜನ ಸೇರುತ್ತಾರೆ. ಕಾರ್ಯಕರ್ತರು, ನಾಯಕರ ಅಭಿಮಾನಿಗಳು ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸುತ್ತಾರೆ. ಆದರೆ, ಇಂತಹ ಕಾರ್ಯಕ್ರಮಗಳಲ್ಲೂ ಜೇಬುಗಳ್ಳತನ ನಡೆಯುತ್ತವೆ, ಮಾಜಿ ಶಾಸಕರ ಜೇಬಿನಿಂದಲೇ ಲಕ್ಷಾಂತರ ರೂಪಾಯಿ ಎಗರಿಸುತ್ತಾರೆ ಎಂಬುದು ಈಗ ಸಾಬೀತಾಗಿದೆ. ಹೌದು, ಮಡಿಕೇರಿಯಲ್ಲಿ (Madikeri) ನಡೆದ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಭಾಗವಹಿಸಿದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಸೇರಿ ಹಲವು ನಾಯಕರ ಜೇಬುಗಳಿಗೆ ಖದೀಮರು ಕತ್ತರಿ ಹಾಕಿದ ಘಟನೆ ನಡೆದಿದೆ.
ಮಡಿಕೇರಿಯ ಕ್ರಿಸ್ಟಲ್ ಕೋರ್ಟ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆದಿದೆ. ನೂರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬಿ.ವೈ.ವಿಜಯೇಂದ್ರ ಅವರೂ ಪಾಲ್ಗೊಂಡು, ಲೋಕಸಭೆ ಚುನಾವಣೆ ಸಿದ್ಧತೆ, ಪಕ್ಷದ ಕಾರ್ಯಕರ್ತರ ಪರಿಶ್ರಮ, ಚುನಾವಣಾ ಪ್ರಚಾರ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು. ಇದೇ ವೇಳೆ, ಖದೀಮರು ಮಾಜಿ ಶಾಸಕ ಅಪ್ಪಚ್ಚು ರಂಜನ್ ಸೇರಿ ಹಲವು ನಾಯಕರ ಜೇಬಿನಿಂದ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದಾರೆ.
ಯಾರ ಜೇಬಿಂದ ಎಷ್ಟು ಕಳ್ಳತನ?
ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಜೇಬಿನಲ್ಲಿದ್ದ ಪರ್ಸ್ ಎಗರಿಸಿದ್ದು, ಅದರಲ್ಲಿ 20 ಸಾವಿರ ರೂ. ಇತ್ತು ಎಂಬುದಾಗಿ ಅವರೇ ಹೇಳಿದ್ದಾರೆ. ಇನ್ನು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಜೇಬಿನಿಂದ 13 ಸಾವಿರ ರೂ., ಗುತ್ತಿಗೆದಾರರೊಬ್ಬರ ಜೇಬಿನಿಂದ 50 ಸಾವಿರ ರೂ. ಹಾಗೂ ಬಿಜೆಪಿ ಮುಖಂಡರೊಬ್ಬರ ಜೇಬಿನಿಂದ 25 ಸಾವಿರ ರೂ. ಎಗರಿಸಲಾಗಿದೆ. ಕಾರ್ಯಕ್ರಮದಲ್ಲಿ ನೂರಾರು ಜನ ಪಾಲ್ಗೊಂಡ ಕಾರಣ ನಾಯಕರು ಗಡಿಬಿಡಿಯಲ್ಲಿದ್ದರು. ಅವರು ಬಿಡುವಿಲ್ಲದ ಕೆಲಸದಲ್ಲೂ ತೊಡಗಿದ್ದರು. ಇದೇ ಸಂದರ್ಭವನ್ನು ನೋಡಿಕೊಂಡ ಕಳ್ಳರು ಕೈಚಳಕ ತೋರಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಯದುವೀರ್ ವಿರುದ್ಧ ಒಂದೇ ಒಂದು ಟೀಕೆ ಮಾಡದ ಸಿದ್ದರಾಮಯ್ಯ; ಏಕಿಷ್ಟು ಸಾಫ್ಟ್ ಕಾರ್ನರ್?
ಕಳ್ಳತನದ ಕುರಿತು ಮಾತನಾಡಿದ ಮಾಜಿ ಶಾಸಕ ಅಪ್ಪಚ್ಚು ರಂಜನ್, “ಕಾರ್ಯಕ್ರಮದಲ್ಲಿ ನನ್ನ ಜೇಬಿನಿಂದ ಪರ್ಸ್ ಕಳ್ಳತನ ಮಾಡಲಾಗಿದೆ. ಅದರಲ್ಲಿ ಸುಮಾರು 20 ಸಾವಿರ ರೂ. ಇತ್ತು. ಹಣ ಹೋದರೆ ಹೋಗಲಿ, ಕಾರ್ಡ್, ದಾಖಲೆಗಳು ಸಿಕ್ಕರೆ ಸಾಕು” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇನ್ನು, ಈ ಕುರಿತು ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಹಿರಿಯ ನಾಯಕ ಎಸ್.ಜಿ.ಮೇದಪ್ಪ ಅವರ ಪರ್ಸ್ ಕೂಡ ಕಳ್ಳತನ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ