ಮಂಗಳೂರು: ಕೇವಲ ರೈತರ ಸಾಲ ಮನ್ನಾ ಮಾಡುವುದರಿಂದ ಅವರ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಅವರ ಸಬಲೀಕರಣಕ್ಕೆ ಕಾರ್ಯಕ್ರಮಗಳು ಬೇಕಾಗಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ಕೆಲಸವನ್ನು ಮಾಡುತ್ತಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejaswi surya) ಹೇಳಿದ್ದಾರೆ.
ಬಿಜೆಪಿ ಆರ್ಥಿಕ ಪ್ರಕೋಷ್ಠದ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿದ ಬಜೆಟ್ ವಿಶ್ಲೇಷಣೆ ೨೦೨೩-ಒಂದು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣಾ ಲಾಭಕ್ಕಾಗಿ ರೈತರ ಸಾಲ ಮನ್ನಾ ಮಾಡಲು ಮುಂದಾಗಿತ್ತು. ಇದೆಲ್ಲವೂ ತಾತ್ಕಾಲಿಕ ಕ್ರಮಗಳು ಆದರೆ, ಮೋದಿ ಸರಕಾರ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಅವರ ಸಬಲೀಕರಣಕ್ಕೆ ಕ್ರಮ ಕೈಗೊಳ್ಳುತ್ತಿದೆ. ಇದು ಬಹುಕಾಲದವರೆಗೆ ಪರಿಣಾಮವನ್ನು ಉಂಟು ಮಾಡುತ್ತವೆ. ಇದುವೇ ಎರಡು ಪಕ್ಷಗಳ ಸರ್ಕಾರ ಮತ್ತು ಅವುಗಳ ಆರ್ಥಿಕ ನೀತಿಗಳ ನಡುವೆ ಇರುವ ವ್ಯತ್ಯಾಸ ಎಂದು ವಿವರಿಸಿದರು.
ಹಾಗಿದ್ದರೆ ತೇಜಸ್ವಿ ಸೂರ್ಯ ಹೇಳಿದ್ದೇನು?
ʻʻ2008ನೇ ಇಸವಿಯಲ್ಲಿ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಅವರು ೨೦೦೯ನೇ ಇಸವಿಯಲ್ಲಿ ಎಲೆಕ್ಷನ್‌ಗೆ ಹೋಗಬೇಕಿತ್ತು. ೨೦೦೮ನೇ ಇಸವಿಯ ಅವರ ಫುಲ್ ಬಜೆಟ್‌ನಲ್ಲಿ ಅವರು ಮಾಡಿದ್ದೇನು ಅಂತಂದ್ರೆ ೧ ಲಕ್ಷ ಕೋಟಿ ರೂ. ಮೊತ್ತದ ರೈತರ ಸಾಲವನ್ನು ಮನ್ನಾ ಮಾಡಿದರು. ಎಲೆಕ್ಷನ್ ಗೆಲ್ಲಬೇಕು ಎನ್ನುವ ದೃಷ್ಟಿಯಿಂದ. ರೈತರ ಸಾಲ ಮನ್ನಾ ಮಾಡಿದ್ದು, ತಾತ್ಕಾಲಿಕವಾಗಿ ರೈತರಿಗೆ ಒಂದಿಷ್ಟು ಉಪಯೋಗ ಆಯಿತು. ಆದರೆ, ದೇಶದ ಆರ್ಥಿಕತೆಗೆ ಯಾವುದೇ ಉಪಯೋಗ ಆಗಲಿಲ್ಲ. ಆದರೆ, ನಮ್ಮ ನರೇಂದ್ರ ಮೋದಿ ಸರ್ಕಾರ ಮುಂದಿ ವರ್ಷ ಚುನಾವಣೆ ಇದ್ದರೂ ಕೂಡಾ ಈ ರೀತಿಯ ದೇಶಕ್ಕೆ ಲುಕ್ಸಾನು ಉಂಟು ಮಾಡುವ ಪಾಪ್ಯುಲಿಸ್ಟ್ ಯೋಜನೆಗಳಿಗೆ ಹೋಗಲಿಲ್ಲ. ಬದಲಾಗಿ, ೧೦ ಲಕ್ಷ ಕೋಟಿ ರೂ. ಯನ್ನು ಇನ್ವೆಸ್ಟ್ ಮಾಡುತ್ತೇವೆ, ಇನ್ಫ್ರಾಸ್ಟ್ರಕ್ಚರ್ ಕ್ರಿಯೇಟ್ ಮಾಡ್ತೀವಿ.. ಆ ಮೂಲಕ ೩೦ ಲಕ್ಷ ಕೋಟಿ ರೂ.ಯ ಲಾಭವನ್ನು ಈ ದೇಶದಲ್ಲಿ ನಾವು ಕಾಣುತ್ತೇವೆ ಎನ್ನುವಂಥ ವಿಷನರಿ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಇದು ಬಿಜೆಪಿಯ ಆರ್ಥಿಕ ಮಾದರಿಗೂ ಕಾಂಗ್ರೆಸ್‌ನ ಆರ್ಥಿಕ ಮಾದರಿಗೂ ಇರುವ ವ್ಯತ್ಯಾಸʼʼ ಎಂದು ಹೇಳಿದ್ದಾರೆ ತೇಜಸ್ವಿ ಸೂರ್ಯ.
ಇದನ್ನೂ ಓದಿ : ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದರಾ ತೇಜಸ್ವಿ ಸೂರ್ಯ?-ಅಂದು ಜತೆಗಿದ್ದ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?