Site icon Vistara News

ಮೊಟ್ಟೆಯಿಂದಲೇ ಆರೋಗ್ಯ ಸುಧಾರಿಸುತ್ತಾ? ಶಾಲೇಲೆ ಯಾಕೆ, ಮನೆಗೆ ಕೊಡಿ: ತೇಜಸ್ವಿನಿ ಅನಂತಕುಮಾರ್‌ ವಾದ

tejaswini Anaantkumar

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಮೊಟ್ಟೆ ವಿತರಿಸುವ ಯೋಜನೆಯ ಬಗ್ಗೆ ಆಡಳಿತ ಪಕ್ಷದ ನಾಯಕಿಯೊಬ್ಬರಿಂದಲೇ ಅಪಸ್ವರ ಕೇಳಿಬಂದಿದೆ. ಬಿಜೆಪಿ ನಾಯಕಿ ತೇಜಸ್ವಿನಿ ಅನಂತ ಕುಮಾರ್‌ ಅವರು ಕೆಲವೊಂದು ತಾತ್ವಿಕ ಅಂಶಗಳೊಂದಿಗೆ ಶಾಲೆಯಲ್ಲಿ ಮೊಟ್ಟೆ ಕೊಡುವುದರಿಂದ ಎಷ್ಟು ಲಾಭ, ಯಾಕೆ ಅಗತ್ಯವಿಲ್ಲ, ನಿಜವಾಗಿ ಹೇಗೆ ಕೊಡಬೇಕು ಎನ್ನುವುದನ್ನು ವಿಶ್ಲೇಷಿಸಿದ್ದಾರೆ.

ಮೊಟ್ಟೆಯಿಂದಲೇ ಆರೋಗ್ಯ ಎನ್ನುವುದು ನಿಜವಲ್ಲ. ಮಕ್ಕಳಿಗೆ ಬೇರೆ ಬೇರೆ ಪೋಷಕಾಂಶಗಳು ಕೂಡಾ ಬೇಕಾಗುತ್ತವೆ. ಅವುಗಳನ್ನು ಕೂಡಾ ನೀಡಬೇಕು. ಹೀಗಿರುವಾಗ ಅದನ್ನು ಮನೆಗೇ ರೇಷನ್‌ ರೂಪದಲ್ಲಿ ಕಳುಹಿಸಿಕೊಡಬಾರದೇಕೆ ಎನ್ನುವುದು ತೇಜಸ್ವಿನಿ ಅನಂತ ಕುಮಾರ್‌ ಅವರ ಪ್ರಶ್ನೆ. ಅದಕ್ಕಿಂತಲೂ ಮುಖ್ಯವಾದ ಕೆಲವು ಪ್ರಶ್ನೆಗಳನ್ನು ತೇಜಸ್ವಿನಿ ತಮ್ಮ ಟ್ವೀಟ್‌ನಲ್ಲಿ ಎತ್ತಿದ್ದಾರೆ. ಟ್ವೀಟ್‌ನ ಪ್ರಮುಖಾಂಶಗಳು ಇಲ್ಲಿವೆ.

೧.ಅಸಮಾನತೆಯೇ ತುಂಬಿರುವ ನಮ್ಮ ಸಮಾಜದಲ್ಲಿ ಮಕ್ಕಳು ಸಮಾನತೆಯ ಸಹಜೀವನವನ್ನು ಅನುಭವಿಸಲು ಕೆಲವೇ ಕೆಲವು ಜಾಗಗಳಿವೆ. ಅವುಗಳಲ್ಲಿ ಶಾಲೆಯೂ ಒಂದು. ಒಂದು ಮಗುವಿನ ಸಾಮಾಜಿಕ ಸ್ಥಾನಮಾನ ಅದರ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕಾಗಿಯೇ ಶಾಲೆಗಳಲ್ಲಿ ಸಮವಸ್ತ್ರ ಜಾರಿ ಮಾಡಿದ್ದೇವೆ.

೨. ನಾನು ಮೊಟ್ಟೆ ಕೊಡುವುದರ ವಿರೋಧಿಯಲ್ಲ. ಆದರೆ, ಕೇವಲ ಮೊಟ್ಟೆ ಕೊಡುವುದರಿಂದಲೇ ಎಲ್ಲ ಅಪೌಷ್ಟಿಕತೆ ಸಮಸ್ಯೆಯನ್ನು ನೀಗಿಸಬಹುದು ಎಂದು ನಾವು ತಿಳಿದಿದ್ದರೆ ಅದು ತಪ್ಪು.

೩. ನಾವು ಅಪೌಷ್ಟಿಕತೆ ಸಮಸ್ಯೆಯನ್ನು ಪರಿಹರಿಸಲು ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಕೊಬ್ಬು, ಪ್ರೊಟೀನ್‌, ವಿಟಮಿನ್‌ಗಳು, ಕಾರ್ಬೊಹೈಡ್ರೇಟ್‌ಗಳನ್ನೂ ಕೂಡಾ ನಾವು ಒದಗಿಸಬೇಕು. ಅವುಗಳನ್ನು ನಮ್ಮ ಸಿರಿಧಾನ್ಯಗಳು, ಸ್ಥಳೀಯ ಹಣ್ಣುಗಳು, ತರಕಾರಿ, ತೈಲ ಮತ್ತು ಕಾಳುಗಳ ಮೂಲಕ ನೀಡಬಹುದು.

೪. ಮೊಟ್ಟೆಗಳ ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಬಹಳಷ್ಟು ಸಮಸ್ಯೆಗಳಿವೆ. ಅದನ್ನು ಕಾಯ್ದುಕೊಳ್ಳುವುದು ತುಂಬ ಕಷ್ಟ. ಇದೇ ಕಾರಣಕ್ಕೆ ಆಹಾರ ಉದ್ಯಮವೇ ಮೊಟ್ಟೆಯ ಪರ್ಯಾಯ ಮೂಲಗಳನ್ನು ಹುಡುಕುತ್ತಿದೆ. ಮೊಟ್ಟೆಗಳು ಒಳಗೆ ಹಾಳಾಗಿಯೂ ಇರಬಹುದು. ಅದನ್ನು ಪತ್ತೆ ಹಚ್ಚುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ನಮಗೆ ಪ್ರತಿಯೊಂದು ಮಗುವಿನ ಆರೋಗ್ಯವೂ ಮುಖ್ಯವೇ.
೫. ನಮ್ಮಲ್ಲಿ ಸಾಕಷ್ಟು ಏಕದಳ, ದ್ವಿದಳ ಧಾನ್ಯಗಳಿವೆ. ಅವುಗಳನ್ನು ಮೊಳಕೆ ಬರಿಸಿ ಕೊಡುವುದು ಉತ್ತಮ. ಇದು ಉತ್ತಮ ಆಹಾರ. ಇದು ಕೇವಲ ಪೋಷಕಾಂಶಕ್ಕೆ ಮಾತ್ರವಲ್ಲ ರಾಜ್ಯದ ರೈತರಿಗೂ ಇದರ ಬಳಕೆಯಿಂದ ಅನುಕೂಲವಾಗಲಿದೆ.

೬. ಒಂದು ವೇಳೆ ಸರಕಾರಕ್ಕೆ ಮೊಟ್ಟೆಯನ್ನು ಕೊಡಲೇಬೇಕು ಎಂದಿದ್ದರೆ ಅದನ್ನು ಮನೆಗೇ ಕಳುಹಿಸಿ. ಹೇಗೂ ಕೆಲವು ಆಹಾರ ಪದಾರ್ಥ, ಚಿಕ್ಕಿ ಮತ್ತಿತರ ವಸ್ತುಗಳನ್ನು ಮನೆಗೆ ರೇಷನ್‌ನಂತೆ ನೀಡಲಾಗುತ್ತಿದೆಯಲ್ಲವೇ?

ಇದನ್ನೂ ಓದಿ| ಎನ್‌ಇಪಿ ಸಮಿತಿ ವರದಿ ತಿರಸ್ಕರಿಸಿದ ಸರ್ಕಾರ?: ರಾಜ್ಯಾದ್ಯಂತ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ನಿರ್ಧಾರ

Exit mobile version