ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 5 ಗ್ಯಾರಂಟಿಯನ್ನು (congress guarantee) ಈಡೇರಿಸುವುದಾಗಿ ಹೇಳಿತ್ತು. ಇದರಲ್ಲಿ 200 ಯುನಿಟ್ ಉಚಿತ ವಿದ್ಯುತ್ ಸಹ ಸೇರಿತ್ತು. ಹೀಗಾಗಿ ರಾಜ್ಯದ ಹಲವು ಕಡೆ ಜನರು ವಿದ್ಯುತ್ ಬಿಲ್ (electricity bill) ಕಟ್ಟುವುದಿಲ್ಲ ಎಂದು ವರಾತೆ ತೆಗೆದಿದ್ದಾರೆ. ಆದರೆ, ಇದರಿಂದ ಕಂಗೆಟ್ಟಿರುವ ಬೆಸ್ಕಾಂ ಅಧಿಕಾರಿಗಳು ಒಂದು ಸೂಚನೆಯನ್ನು ಕೊಟ್ಟಿದ್ದು, ನಮಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ವಿದ್ಯುತ್ ಬಿಲ್ ಅನ್ನು ಎಲ್ಲರೂ ಕಟ್ಟಬೇಕು ಎಂದು ಹೇಳಿದೆ.
ಚಿತ್ರದುರ್ಗದ ಕೆಲವು ಕಡೆಗಳಲ್ಲಿ ವಿದ್ಯುತ್ ಬಿಲ್ ಪಾವತಿಗೆ ಜನರು ನಿರಾಕರಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿದ್ದಾಪುರ ಗ್ರಾಮದಲ್ಲಿ ಬಿಲ್ ಕಟ್ಟುವುದಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದರು. ಮತ್ತೆ ಕೆಲವು ಕಡೆ ವಿದ್ಯುತ್ ಬಿಲ್ ಪಾವತಿಗೆ ಗ್ರಾಮಸ್ಥರು ನಿರಾಕರಿಸಿದ್ದರು.
ಇದನ್ನೂ ಓದಿ: DK Shivakumar: ಮೋದಿ ಸ್ಟೈಲಲ್ಲಿ ವಿಧಾನಸಭೆ ಪ್ರವೇಶಿಸಿದ ಡಿಕೆಶಿ; 9 ವರ್ಷದ ಬಳಿಕ ಅದೇ ದಿನ!
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಬೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದು, ಉಚಿತ ವಿದ್ಯುತ್ ನೀಡುವುದರ ಬಗ್ಗೆ ನಮಗೆ ಯಾವುದೇ ಆದೇಶ ಬಂದಿಲ್ಲ. ಸರ್ಕಾರದಿಂದ ನಮ್ಮ ವಿದ್ಯುತ್ ನಿಗಮ ಕಂಪನಿಗಳಿಗೆ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಗ್ರಾಹಕರು ವಿದ್ಯುತ್ ಬಿಲ್ ಅನ್ನು ಕಡ್ಡಾಯವಾಗಿ ಪಾವತಿಸಬೇಕು. ಒಂದು ವೇಳೆ ಸರ್ಕಾರದಿಂದ ಆದೇಶ ಬಂದಿದ್ದರೂ ಹಳೆಯ ಬಾಕಿ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಬಾಕಿ ಬಿಲ್‌ಗೆ ಅನ್ವಯ ಇಲ್ಲ
ಒಂದು ವೇಳೆ ಇನ್ನು ಮುಂದೆ ಸರ್ಕಾರ ಆದೇಶ ಹೊರಡಿಸಿದರೂ ಬಾಕಿ ಬಿಲ್‌ಗೆ ಆ ಆದೇಶ ಅನ್ವಯಿಸುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಜನರು ಈಗಾಗಲೇ ಬಳಕೆ ಮಾಡಿರುವ ವಿದ್ಯುತ್‌ಗಳ ಬಿಲ್ ಅನ್ನು ಕಟ್ಟಬೇಕು ಎಂದು ಗ್ರಾಹಕರಿಗೆ ಬೆಸ್ಕಾಂ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ಎಲ್ಲರಿಗೂ ವಿದ್ಯುತ್ ಬಿಲ್ ಉಚಿತ
24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಿದ್ದರಾಮಯ್ಯ ಅವರು ಮೊದಲ ಕ್ಯಾಬಿನೆಟ್ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಮಾತನಾಡುತ್ತಾ, ಎಲ್ಲ ಮನೆಗಳಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಇದು ಮುಂದಿನ ಸಚಿವ ಸಂಪುಟ ಸಭೆ ಬಳಿಕ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka CM: ಕರ್ನಾಟಕದ ಮಹಿಳೆಯರಿಗೆ ಫ್ರೀ ಬಸ್ ಪಾಸ್, ಕರೆಂಟ್ ಫ್ರೀ: 5 ಗ್ಯಾರಂಟಿ ಜಾರಿಗೆ ತಾತ್ವಿಕ ಒಪ್ಪಿಗೆ
ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಮುಂದಿನ ಸಚಿವ ಸಂಪುಟ ಆಗುವವರೆಗೂ ಕಾಯಬೇಕಿದೆ. ಆದರೆ, ಯಾವ ಸಮಯದಿಂದ ಈ ಆದೇಶ ಜಾರಿಗೆ ಬರಲಿದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.