ಉಡುಪಿ: ರಾಜ್ಯದಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಇಲ್ಲ. ದೀಪಾವಳಿಗೂ ವಿದ್ಯುತ್ ವ್ಯತ್ಯಯ (Power Cut) ಇರುವುದಿಲ್ಲ. ಬೇಸಿಗೆಯಲ್ಲಿ ಗ್ರಾಹಕರಿಗೆ ಯಾವುದೇ ಸಮಸ್ಯೆಗಳೂ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಉತ್ಪಾದನೆ ಹೆಚ್ಚಿಸಿ ಸೂಕ್ತ ಸರಬರಾಜು ಮಾಡುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಳೆದ ಮೂರು ತಿಂಗಳಿನಲ್ಲಿ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿದ್ಯುತ್‌ಗೆ ಬೇಡಿಕೆ ಬಂದಿತ್ತು. ರಾಜ್ಯದ 14800 ಮೆಗಾ ವ್ಯಾಟ್ ವಿದ್ಯುತ್ ನಿರ್ವಹಣೆ ಮಾಡಿದ್ದೇವೆ. ವರ್ಷದಲ್ಲಿ ಒಮ್ಮೆ ವಿದ್ಯುತ್ ದರ ಏರಿಕೆ ಮಾಡಲು ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಗಿದೆ. ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸಬಾರದು ಎಂದು ವಿನಂತಿಸಲಾಗಿದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ನೆಪ ಮಾತ್ರಕ್ಕೆ ಅಧ್ಯಕ್ಷ
ಎಐಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಈಗಾಗಲೇ ಪ್ರತಿಸ್ಪರ್ಧಿಯಾಗಿದ್ದ ಶಶಿ ತರೂರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಗಾಂಧಿ ಕುಟುಂಬದವರು ಹಿರಿಯ ಮುತ್ಸದ್ಧಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ್ದಾರೆ. ಅಧ್ಯಕ್ಷನೂ ಬೇಕು, ಹೇಳಿದ ಹಾಗೆಯೂ ಕೇಳಬೇಕು ಎಂಬ ಉದ್ದೇಶ ಇದರ ಹಿಂದೆ ಇದೆ. ಆಡಳಿತವನ್ನು ಗಾಂಧಿ ಕುಟುಂಬವೇ ನಡೆಸಬೇಕು ಎಂಬ ಇರಾದೆ ಇದೆ. ಆದರೆ, ಬಿಜೆಪಿಯಲ್ಲಿ ಬೂತ್‌ನಿಂದ ರಾಷ್ಟ್ರಾಧ್ಯಕ್ಷರವರೆಗೆ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಬಿಜೆಪಿ ಆಂತರಿಕ ಚುನಾವಣೆಯು ಆರು ತಿಂಗಳು ಸುದೀರ್ಘ ಅವಧಿಯಲ್ಲಿ ನಡೆಯುತ್ತದೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಇದನ್ನೂ ಓದಿ | Puneeth Parva | ನವೆಂಬರ್ 1ರಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ನಾಡಿನ ಜನತೆಗೆ ಬೊಮ್ಮಾಯಿ ಆಹ್ವಾನ!
ದೈವ ನರ್ತಕರಿಗೆ ಮಾಸಾಶನ ಕೊಡುವ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ 58 ವರ್ಷ ಮೇಲ್ಪಟ್ಟ ದೈವನರ್ತಕರ ಗಣತಿ ನಡೆಯುತ್ತದೆ. ನಮ್ಮ ಇಲಾಖೆ ಅಧಿಕಾರಿಗಳು ಗುರುತಿಸುವ ಕೆಲಸವನ್ನು ಮಾಡುತ್ತಾರೆ. ರಾಜ್ಯ ಸರ್ಕಾರದಿಂದ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ದೈವನರ್ತಕ ಸಂಘದ ಮೂಲಕ ಗುರುತಿಸುವ ಪ್ರಕ್ರಿಯೆ ನಡೆಯಲಿದೆ. ಸರ್ಕಾರ ಅಭಿಯಾನ ನಡೆಸಿ ನೋಂದಣಿ ಪ್ರಕ್ರಿಯೆ ನಡೆಸಲಿದೆ. ದೈವ ನರ್ತಕರ ಸಮುದಾಯ ಭವನಕ್ಕೆ ಹಣಕಾಸಿನ ಕೊರತೆ ಇಲ್ಲ. ಸಮುದಾಯಕ್ಕೆ ಬೇಕಾದ ಚಟುವಟಿಕೆಯನ್ನು ಮಾಡಲು ಸರ್ಕಾರ ಸಹಾಯ ಮಾಡುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಕಾಂತಾರ ತುಳುನಾಡ ಸಂಸ್ಕೃತಿಗೆ ಸಿಕ್ಕ ಗೌರವ
ಇತ್ತೀಚಿನ ವರ್ಷಗಳಲ್ಲೇ ಕಾಂತಾರ ಒಳ್ಳೆಯ ಸಿನಿಮಾ. ನಮ್ಮ ಜಿಲ್ಲೆಯ ವ್ಯಕ್ತಿಗಳು ಮಾಡಿದ ಚಿತ್ರದ ಬಗ್ಗೆ ಖುಷಿಯಿದೆ. ದೈವರಾಧನೆಯನ್ನು ಬಹಳ ಚೆನ್ನಾಗಿ ಬಿಂಬಿಸಿದ್ದಾರೆ. ನಟನೆಯ ಜತೆ ದೈವದ ಕೃಪೆಯಿಂದ ಚಿತ್ರ ಯಶಸ್ವಿಯಾಗಿದೆ. ಕಾಂತಾರ ತುಳುನಾಡ ಸಂಸ್ಕೃತಿಗೆ ಸಿಕ್ಕ ಗೌರವವಾಗಿದೆ. ನಂಬಿಕೆಯಿಂದ ದೂರ ಇರುವವರು ಅದನ್ನು ಆಕ್ಷೇಪಿಸುತ್ತಾರೆ ಎಂದು ಸಚಿವ ಸುನಿಲ್ ಹೇಳಿದರು.
ನಮ್ಮ ಜಿಲ್ಲೆಯ ಜನ ನಂಬಿಕೆ ಮತ್ತು ಶ್ರದ್ಧೆಯಿಂದ ಬದುಕುವವರು. ದೈವ ಎಂಬುದು ನಮ್ಮ ನಂಬಿಕೆಯಾಗಿದ್ದು, ದೈವದ ಮೂಲಕ ನಮ್ಮ ದಿನಚರಿ ಆರಂಭವಾಗುತ್ತದೆ. ನಂಬಿಕೆ ಸಂಸ್ಕೃತಿ ಇಲ್ಲದವರು ವ್ಯತಿರಿಕ್ತವಾಗಿ ಮಾತನಾಡುತ್ತಾರೆ. ನಂಬಿಕೆ, ಶ್ರದ್ಧೆ ಇರುವವರು ಅದಕ್ಕೆ ಪ್ರತಿಕ್ರಿಯೆ ಕೊಡಬೇಕಾಗಿಲ್ಲ, ನಾಟಕ ಸಿನಿಮಾಗಳು ಕಾಲಕಾಲಕ್ಕೆ ಸಮಾಜವನ್ನು ಎಚ್ಚರಿಸಬೇಕು. ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಗಾಂಧೀಜಿಯನ್ನು ಸತ್ಯ ಹೇಳುವಂತೆ ಮಾಡಿತು. ಕಾಂತಾರ ಸಿನಿಮಾ ಸಹ ಸಮಾನತೆಯ ಜಾಗೃತಿ ಮಾಡಲಿ, ಸಮಾಜದಲ್ಲಿ ಈ ಮೂಲಕ ಬದಲಾವಣೆಗಳು ಆಗಲಿ. ಕನ್ನಡ ಸಂಸ್ಕೃತಿ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಬಿಜೆಪಿಗೆ 150 ಸೀಟು-ಉಳಿದದ್ದೆಲ್ಲ ಬೇರೆಯವರಿಗೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೧೫೦ ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಉಳಿದ ಕ್ಷೇತ್ರಗಳು ಬೇರೆ ಪಕ್ಷದವರಿಗೆ ಲಭಿಸಲಿದೆ. ಸಮೀಕ್ಷೆಗಳ ಮೇಲೆ ನಾವು ಚುನಾವಣೆಯನ್ನು ಎದುರಿಸುವುದಿಲ್ಲ. ಕಾರ್ಯಕರ್ತರು, ಅಭಿವೃದ್ಧಿ ಹಾಗೂ ನಮ್ಮ ಸಾಧನೆಯ ಮೇಲೆ ಚುನಾವಣೆಗೆ ಹೋಗುತ್ತೇವೆ. ಮಿಷನ್ 150 ನಮ್ಮ ಕಣ್ಣ ಮುಂದಿದ್ದು, ಇದನ್ನು ಗುರಿಯಾಗಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ ಎಂದು ಸುನೀಲ್ ಕುಮಾರ್ ಹೇಳಿದರು.
ಇದನ್ನೂ ಓದಿ | ಶಿಕ್ಷಣ ಇಲಾಖೆಯ ಹೊಸ ವೆಬ್ ಶುರು; ಶಿಕ್ಷಣ ಸಚಿವರಿಗೆ ನೇರವಾಗಿ ಪತ್ರ ಬರೆಯಲು ಅವಕಾಶ