Site icon Vistara News

JDS Politics: ಇಂಡಿಯಾ ಮೈತ್ರಿಕೂಟದ ಹೆಸರಿನಲ್ಲಿ ನಾಡಿನ ಸಂಪತ್ತು ಲೂಟಿ ಮಾಡಲು ಹೊರಡಿದ್ದಾರೆ ಎಂದ ಎಚ್‌ಡಿಕೆ

Ex Cm HD Kumaraswamy

ಬೆಂಗಳೂರು: ಗ್ಯಾರಂಟಿ ಹೆಸರಿನಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ನಿಂತಿದೆ. ರಾಜ್ಯ ಸಂಪತ್ಭರಿತವಾದ ಖಜಾನೆ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕೆಲಸ ಮಾಡಲು ಹಣದ ಕೊರತೆ ಇಲ್ಲ. ಅಕ್ರಮವಾಗಿ 1000 ಎಕರೆ ಡಿನೋಟಿಫೈ ಮಾಡಿದ್ದಾರೆ. ಇಂಡಿಯಾ ಮೈತ್ರಿಕೂಟ ಹೆಸರಿನಲ್ಲಿ ನಾಡಿನ ಸಂಪತ್ತು ಲೂಟಿ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ (JDS Politics) ಮಾತನಾಡಿದ ಅವರು, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ರೈತರಿಗೆ ಸರಿಯಾಗಿ ಕರೆಂಟ್ ಕೊಡುತ್ತಿಲ್ಲ, ಈಗ ದೀಪಾವಳಿಗೆ ದೀಪ ಕೊಡಲು ಹೊರಟಿದ್ದಾರೆ. ಶಿವಕುಮಾರ್, ಸಿದ್ದರಾಮಯ್ಯ ಅವರೇ ಎಲ್ಲಿದೆ 200 ಯುನಿಟ್ ಉಚಿತ ವಿದ್ಯುತ್? ಕಾಕಾ ಪಾಟೀಲ್, ಮಹದೇವಪ್ಪಗೆ ಫ್ರೀ ಎಂದರು‌, ಈಗ ಸರಾಸರಿ ಎಂದು ಮೋಸ ಮಾಡುತ್ತಿದ್ದಾರೆ. ಆದರೂ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

2006ರಲ್ಲಿ ಬಿಜೆಪಿ ಜತೆ ಮೈತ್ರಿ ಸರ್ಕಾರ ಮಾಡಿದ್ದೆ. ದೇವೇಗೌಡರು ಅನಾರೋಗ್ಯಕ್ಕೆ ತುತ್ತಾದರು. ಅವತ್ತು ಬಿಜೆಪಿಯವರೇ ಅವರು ಬಂದು ಸರ್ಕಾರ ಮಾಡೋಣ ಎಂದಿದ್ದರು. ನಾನು ಯಾರ ಮನೆ ಬಾಗಿಲಿಗೆ ಸಿಎಂ ಮಾಡಿ ಎಂದಿಲ್ಲ. ಎಂಪಿ ಪ್ರಕಾಶ್ ಅವರಿಗೆ ಸಿಎಂ ಆಗಿ ಎಂದೆ. ಆದರೆ ಅವರು ಒಪ್ಪಲಿಲ್ಲ. ಪಕ್ಷ ಉಳಿಸಲು ನಾನು ಬಿಜೆಪಿ ಅವರ ಜತೆ ಸರ್ಕಾರ ಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ | JDS Politics : ನೈತಿಕತೆ ಬಗ್ಗೆ ಮಾತನಾಡೋರು ಯಾರು? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಎಚ್.ಡಿ. ದೇವೇಗೌಡ

ರೈತರ ಭೂಮಿ ಹೊಡೆಯುತ್ತಿರುವುದು ಗೊತ್ತಾದ ನಂತರ ದೇವೇಗೌಡರೇ ಹೋರಾಟಕ್ಕೆ ಇಳಿದರು. ಆದರೆ, ಅವರ ಮೇಲೂ ಕೇಸ್ ಹಾಕಿದರು. 2018ರಲ್ಲಿ ನೀವು ಸಿಎಂ ಆಗಿದ್ದಿರಿ, ಆಗಲೇ ಮಾಡಬಹುದು ಎಂದು ಸಿದ್ದರಾಮಯ್ಯ ಎನ್ನುತ್ತಾರೆ. ನಾವು ಹೇಗೆ ಮಾಡುವುದು, ಮೈತ್ರಿ ಸರ್ಕಾರದಲ್ಲಿ ನಾನು ವಿಷಕಂಠ ಆಗಿದ್ದೆ. ಅವತ್ತು ಡಿ.ಕೆ.ಶಿವಕುಮಾರ್ ನನ್ನ ಜತೆ ಜೋಡೆತ್ತು ಅಂತ ಮಂಡ್ಯದಲ್ಲಿ ಕೈ ಎತ್ತಿಸಿದರು. ನಾನು ಮರುಳಾಗಿ ಹೋದೆ. ನಾನು ಬದಲಾವಣೆ ಆಗಿದ್ದೇನೆ ಎಂದರು. ಆಮೇಲೆ ಎತ್ತಿನ ಬಂಡಿಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋದರು. ಈಗ ಸಿದ್ದರಾಮಯ್ಯ, ಡಿ.ಕೆ. ಒಟ್ಟಾಗಿ ಕೈ ಎತ್ತಿ ಫೋಸ್ ಕೊಡುತ್ತಿದ್ದಾರೆ. ಎಷ್ಟು ದಿನ ಇರುತ್ತೆ ನೋಡೋಣ ಎಂದು ಕಿಡಿ ಕಾರಿದರು.

ನನ್ನನ್ನು ಮೈತ್ರಿ ಸರ್ಕಾರದಲ್ಲಿ ಇತಿ ಮಿತಿಯಲ್ಲಿ ಇಟ್ಟರು. ನಾನು ಏಕಾಂಗಿಯಾಗಿ ತೀರ್ಮಾನ ಮಾಡಲು ಬಿಡಲಿಲ್ಲ. ಅವತ್ತು ಸಿಎಂ ಆಗಿದ್ದಾಗ ನೈಸ್ ವಿಚಾರವಾಗಿ ಮತ್ತೆ ಹೊಸ ಯೋಜನೆ ಮಾಡೋಣ ಎಂದು ಬಿಜೆಪಿ ಅವರಿಗೆ ಹೇಳಿದ್ದೆ. ಆದರೆ ಬಿಜೆಪಿ ಅವರು ಒಪ್ಪಲಿಲ್ಲ ಎಂದ ಅವರು, ಮೈತ್ರಿ ಸರ್ಕಾರದಲ್ಲಿ ನನಗೆ ಹೆಸರು ಬಂತು. ಆದರೆ, ಎರಡೇ ತಿಂಗಳಲ್ಲಿ 150 ಆರೋಪ ಮಾಡಿದರು. ಸಿಂಗಾಪುರ್‌ಗೆ ಹೋದಾಗ ನೈಸ್ ಕಂಪನಿಯವನು ಬಂದಿದ್ದ. ಅಂದು ನಾನು ನಿಮ್ಮ ಪಾಪದ ಕೆಲಸಕ್ಕೆ ಕೈ ಜೋಡಿಸಲ್ಲ ಎಂದು ವಾಪಸ್ ಕಳುಹಿಸಿದೆ. ಇವತ್ತು ನೈಸ್ ರಸ್ತೆ ವಿಚಾರದಲ್ಲಿ ಏನು ನಡೆಯುತ್ತಿದೆ. ಸದನ ಸಮಿತಿ ವರದಿ ಇದೆ. ವರದಿಯಲ್ಲಿ ಅಕ್ರಮ ಆಗಿರುವ ಮಾಹಿತಿ ಇದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಳಜಿ ಇದ್ದರೆ ರೈತರನ್ನು ಉಳಿಸಬೇಕು

ಗ್ಯಾರಂಟಿಗಳನ್ನು ಪ್ರಚಾರ ಮಾಡಲು ಮಾಡಿದ್ದೀರಾ? ರೈತರಿಂದ 14 ಸಾವಿರ ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ನೈಸ್‌ಗೆ ಪಡೆದಿದ್ದಾರೆ. ಅದನ್ನು ಕೂಡಲೇ ವಾಪಸ್ ಪಡೆಯಬೇಕು. ಸಿದ್ದರಾಮಯ್ಯ ಅವರೇ ಎರಡನೇ ಬಾರಿ ಸಿಎಂ ಆಗಿದ್ದೀರಿ, ನಿಮಗೆ ರೈತರ ಬಗ್ಗೆ ಕಾಳಜಿ ಇದ್ದರೆ, ಅವರನ್ನು ಉಳಿಸಬೇಕು. ಸರ್ಕಾರಕ್ಕೆ ದಮ್ಮು,,‌ ತಾಕತ್ತು ಇದ್ದರೆ ರೈತರ ಜಮೀನು ವಾಪಸ್ ಪಡೆಯಿರಿ. 2-3 ಲಕ್ಷ ಕೋಟಿ ರೂ ಮೌಲ್ಯದ ಭೂಮಿ ನುಂಗಿದ್ದಾರೆ. ಇದನ್ನು ವಾಪಸ್ ಪಡೆಯಿರಿ. ನಮಗೆ ಪೂರ್ಣ ಬಹುಮತ ಬಂದಿದ್ದರೆ ನಾವು ಕ್ರಮ‌‌ ತೆಗೆದುಕೊಳ್ಳುತ್ತಿದ್ದೆವು. ನಿಮ್ಮ ಮಂತ್ರಿ ಮಂಡಳದ ಸಚಿವರೇ ಅವರ ಜತೆ ಕೈ ಜೋಡಿಸಿದ್ದಾರೆ‌. ಪೆನ್ನು, ಪೇಪರ್ ಕೊಟ್ಟಿರುವವರು ನೈಸ್ ಅಕ್ರಮಕ್ಕೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು.

ನೈಸ್ ಕಂಪನಿ ವಿಚಾರದಲ್ಲಿ ಸಿದ್ದರಾಮಯ್ಯ ಅವರು ನಮ್ಮ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಆದರೆ, ಅವರು ಭೂಮಿ ವಶಪಡಿಸಿಕೊಂಡು ಜನರಿಗೆ ಕೊಡಲಿ ಎಂದ ಅವರು, ರಸ್ತೆ ಆಗಬೇಕು ಎಂದು ದೇವೇಗೌಡರು ಓಡಾಡಿದರು. ಇವತ್ತು ನಿಮಗೆ ಬತ್ತಳಿಕೆ ‌ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ 700 ಎಕರೆ ಜಾಗ ಹೊಡೆದು, ಈಗ 1200 ಎಕರೆ ಒಡೆಯೋಕೆ ಹೊರಟಿದ್ದಾರೆ ಎಂದು ಕಿಡಿಕಾರಿದರು.

ಬಿಲ್ಡರ್‌ಗಳಿಗೆ ಅಡಿಗೆ 100 ರೂ. ಇಟ್ಟಿದ್ದಾರೆ. ಇದರಲ್ಲಿ 2 ಸಾವಿರ ಕೋಟಿ ರೂ. ಹೊಡೆಯಲು ಹೊರಟಿದ್ದಾರೆ. ಇಂಡಿಯಾ ಹೆಸರಿನಲ್ಲಿ ನಾಡಿನ ಸಂಪತ್ತು ಲೂಟಿ ಮಾಡಲು ಹೊರಟಿದ್ದಾರೆ. ವಿದ್ಯುತ್ ಶಕ್ತಿ ಖರೀದಿ ಮಾಡಿದರೆ ಇವರಿಗೆ ಹಬ್ಬ, ವಿದ್ಯುತ್ ಖರೀದಿ‌ ಮಾಡಿದರೆ ಎಷ್ಟು ಕಿಕ್ ಬ್ಯಾಕ್ ಪಡೆಯುತ್ತೀರಾ ಎಂಬುವುದು ಗೊತ್ತಿದೆ. ಪ್ರತಿ ತಿಂಗಳು 1500 ಕೋಟಿ ರೂ. ಖರ್ಚು ಮಾಡಲು ಹೊರಟಿದ್ದೀರಾ, ಇದರಲ್ಲಿ ಎಷ್ಟು ಹೊಡೆಯುತ್ತೀರಾ? ನಾವು ಇಂತಹ ಲೂಟಿ ಮಾಡಿಲ್ಲ ಎಂದು ಹರಿಹಾಯ್ದರು.

ಬಿಲ್ಡರ್‌ಗಳ ಸಭೆಯಲ್ಲಿ ಚದರ ಅಡಿ ಲೂಟಿ ಮಾಡುತ್ತಿದ್ದಾರೆ. ಕಸದಲ್ಲೂ ಲೂಟಿ ಹೊಡೆಯುತ್ತಿದ್ದಾರೆ. ಕಾಂಗ್ರೆಸ್ ಅವರು ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದೇ ಬಿಟ್ಟೆವು ಎಂಬ ಅಹಂಕಾರದಲ್ಲಿ ಹೋಗುತ್ತಿದ್ದಾರೆ. ಇವರ ಅಹಂಕಾರ ಒಡೆಯೋಕೆ ನಾವು ನಿರ್ಧಾರ ಮಾಡಿದ್ದೇವೆ. ಸಿಎಂ ಇಬ್ರಾಹಿಂ ಅವರೇ ಯಾವತ್ತು ಪಕ್ಷ ನಿಮ್ಮ ಕೈ ಬಿಡಲ್ಲ. ನೀವು ಅಧಿಕಾರ ಬಿಟ್ಟು ಬಂದಿದ್ದೀರಿ, ನಾವು ನಿಮ್ಮ ಕೈ ಬಿಡಲ್ಲ ಎಂದು ಭರವಸೆ ನೀಡಿದರು.

ಕಾಂಗ್ರೆಸ್‌, ಬಿಜೆಪಿಯವರು ಭಯ ಹುಟ್ಟಿಸಿ ಮತ ಪಡೆದಿದ್ದಾರೆ. ಇದು ಜಾಸ್ತಿ ದಿನ ಉಳಿಯೊಲ್ಲ. ಅಲ್ಪ ಸಂಖ್ಯಾತರು ನಮಗೆ ಮತ ಹಾಕಿಲ್ಲ. ಆದರೂ ನಾನು ಜಾತಿ, ಧರ್ಮದ ಮೇಲೆ ರಾಜಕೀಯ ಮಾಡಿಲ್ಲ. ಕಾಂಗ್ರೆಸ್ ರಾಜಕೀಯ ಬೂಟಾಟಿಕೆ ರಾಜಕೀಯ. ಇದಕ್ಕೆ‌‌ ಮರುಳಾಗಬೇಡಿ. ಮೋದಿ ಅವರನ್ನು ಇಳಿಸಿಲು ಇಂಡಿಯಾ ಒಕ್ಕೂಟ ಮಾಡಿದ್ದಾರೆ. ಇದರ ಹಣೆಬರಹ ನನಗೆ ಗೊತ್ತಿದೆ ಎಂದು ತಿಳಿಸಿದರು.

ನನಗೆ ಅನಾರೋಗ್ಯ ಆದಾಗ ತಂದೆಯವರಿಗೆ ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ಬಂದ ಮೇಲೆ ಗೊತ್ತಾಗಿದೆ. ಆಗ ಕರೆ ಮಾಡಿದಾಗ ಎರಡು ದಿನ ವಿಶ್ರಾಂತಿ ಪಡೆಯಲು ಹೇಳಿದ್ದಾರೆ ಎಂದು ಹೇಳಿದ್ದೆ. ನಾನು ಇರುವವರೆಗೆ ನಿನಗೆ ಏನು ಆಗಲ್ಲ, ಪಕ್ಷ ಸಂಘಟನೆಗೆ ಸಿದ್ಧವಾಗಿ ಬಾ ಎಂದು ದೇವೇಗೌಡರು ಹೇಳಿದ್ದರು ಎಂದು ಸ್ಮರಿಸಿದರು.

ಇದನ್ನೂ ಓದಿ | Panchamasali Reservation: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಮತ್ತೆ ಆರಂಭ; ಸಚಿವೆ ಹೆಬ್ಬಾಳ್ಕರ್‌ ಮೂಲಕ ಸರ್ಕಾರಕ್ಕೆ ಮನವಿ

ಸೀಟು ಹಂಚಿಕೆ‌ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಶೇ.99 ಮಂದಿ ರಾಷ್ಟ್ರೀಯ ಅಧ್ಯಕ್ಷರಿಗೆ ತೀರ್ಮಾನ ತೆಗೆದುಕೊಳ್ಳಲು ಎಲ್ಲ ಸಹಮತ ನೀಡಿದ್ದಾರೆ. 100 ಕ್ಕೆ 100 ಸಹಮತ ಪಡೆಯುವುಕ್ಕೆ ನಾಡಿನ ಹಿತ ದೃಷ್ಟಿಯಿಂದ ಮುಂದಿನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಯಾರಿಗೂ ಎಷ್ಟು ಸೀಟ್ ಹಂಚಿಕೆ ಆಗುತ್ತದೆ ಎಂಬುವುದು ಮುಖ್ಯ ಅಲ್ಲ, 28 ಕ್ಷೇತ್ರಗಳೂ ಗೆಲ್ಲಬೇಕು. ಸೀಟು ಹಂಚಿಕೆ‌ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ದೆಹಲಿಗೆ ಹೋಗುವ ಬಗ್ಗೆ‌ ಸಮಯ ನಿಗದಿಯಾಗಿಲ್ಲ ಎಂದು‌ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Exit mobile version